7.61 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

7.61 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಸುಳ್ಯ: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ವಿವಾಹವಾಗಿ ಹೆಂಡತಿಯೊಂದಿಗೆ ಅಬುದಾಬಿಗೆ ತೆರಳಿ ಊರಿಗೆ ಮರಳಿದ ನವವಿವಾಹಿತನ ಮನೆಯ ಗಾಡ್ರೇಜ್‌ನಲ್ಲಿದ್ದ ಬರೋಬ್ಬರಿ 7.61 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಗುತ್ತಿಗಾರು ಗ್ರಾಮದ ತುಪ್ಪದಮನೆ ನಿವಾಸಿ, ದಿ. ದಾಮೋದರ ಗೌಡ ಅವರ ಪುತ್ರ ರಂಜಿತ್ ರಾಜ್ ಟಿ.ಡಿ. (31) ಎಂಬವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ರಂಜಿತ್ ರಾಜ್ ಅವರಿಗೆ ಕಳೆದ ಏಪ್ರಿಲ್ 26, 2026 ರಂದು ವಿವಾಹವಾಗಿತ್ತು. ಬಳಿಕ ಮೇ.೪ ರಂದು ಅವರು ಪತ್ನಿಯೊಂದಿಗೆ ಅಬುದಾಬಿಗೆ ಉದ್ಯೋಗಕ್ಕೆ ತೆರಳುವ ಮುನ್ನ, ಮದುವೆ ವೇಳೆ ಪತ್ನಿಯ ತವರು ಮನೆಯವರು ನೀಡಿದ್ದ ಚಿನ್ನಾಭರಣಗಳು ಹಾಗೂ 6,000 ರೂ. ನಗದನ್ನು ಮನೆಯ ಬೆಡ್ರೂಂನಲ್ಲಿದ್ದ ಗಾಡ್ರೇಜ್ ಅಲ್ಮೆರಾದಲ್ಲಿಟ್ಟು ಲಾಕ್ ಮಾಡಿದ್ದರು. ಬೀಗದ ಕೈಯನ್ನು ತಾಯಿ ಜಾನಕಿಯವರ ಸುಪರ್ದಿಗೆ ನೀಡಿ ಭದ್ರವಾಗಿಟ್ಟುಕೊಳ್ಳುವಂತೆ ತಿಳಿಸಿ ವಿದೇಶಕ್ಕೆ ತೆರಳಿದ್ದರು.

ನವೆಂಬರ್ 1, 2026 ರಂದು ದಂಪತಿ ಅಬುದಾಬಿಯಿಂದ ಮರಳಿ ಮನೆಗೆ ಬಂದಾಗ, ಕೊಠಡಿಯ ಗಾಡ್ರೇಜ್‌ನ ಬಲಬದಿಯ ಬಾಗಿಲು ತೆರೆದಿರುವುದು ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ, ಕೆಲಸಗಾರರಿಗೆ ಹಣ ನೀಡಲು ನಾನೇ ಬೀಗ ತೆಗೆದಿದ್ದೆ ಎಂದು ದೂರುದಾರರ ಅಣ್ಣ ನಿಶ್ಚಿತ್ ತಿಳಿಸಿದ್ದರು.

ಮರುದಿನ ನವೆಂಬರ್ 2 ರಂದು ಮಧ್ಯಾಹ್ನ 12.30ರ ಸುಮಾರಿಗೆ ತಾಯಿ ಹಣ ಕೇಳಿದಾಗ ಗಾಡ್ರೇಜ್ನ ಎಡಭಾಗದ ಬಾಗಿಲು ತೆರೆದು ಹಣ ನೀಡಿದ್ದಾರೆ. ಈ ವೇಳೆ ಪತ್ನಿ ಒಳಭಾಗದ ಲಾಕರ್ ತೆರೆದು ಪರಿಶೀಲಿಸಿದಾಗ, ಲಾಕರ್ನಲ್ಲಿದ್ದ 2 ಬೆಳ್ಳಿ ಬಳೆ, ಉಂಗುರ ಹಾಗೂ ನಗದು ಹಣ ಮಾತ್ರ ಉಳಿದುಕೊಂಡಿದ್ದು, ಉಳಿದ ಚಿನ್ನದ ಆಭರಣಗಳು ಮಾಯವಾಗಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ತಾಯಿ, ಅಣ್ಣ ನಿಶ್ಚಿತ್ ರಾಮ್, ಅತ್ತಿಗೆ ಅಮೃತ ಹಾಗೂ ತಮ್ಮ ಹರ್ಷಿತ್ ಅವರ ಬಳಿ ವಿಚಾರಿಸಿದಾಗ ತಾವು ಯಾರೂ ಲಾಕರ್ ತೆರೆದಿಲ್ಲವೆಂದು ತಿಳಿಸಿದ್ದಾರೆ.

ಕಳವಾದ ಒಟ್ಟು 69 ಗ್ರಾಂ ಚಿನ್ನಾಭರಣಗಳ ವಿವರ: ಸುಮಾರು 22 ಗ್ರಾಂ ತೂಕದ 2 ಚಿನ್ನದ ಬಳೆಗಳು, 25 ಗ್ರಾಂ ತೂಕದ ಲಕ್ಷ್ಮಿ ಪೆಂಡೆಂಟ್ ಇರುವ ನೆಕ್ಲೇಸ್, 10 ಗ್ರಾಂ ತೂಕದ ಜುಮುಕಿ, 12 ಗ್ರಾಂ ತೂಕದ ಚಿನ್ನದ ಚೈನ್ ಸೇರಿದಂತೆ ಒಟ್ಟು ಗಾಡ್ರೇಜ್ ಲಾಕರ್ನಲ್ಲಿದ್ದ 69 ಗ್ರಾಂ ತೂಕದ 7,61,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ರಂಜಿತ್ ರಾಜ್ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article