ನ.14-20: ಅ.ಭಾ.ಸಹಕಾರ ಸಪ್ತಾಹ
ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಮತ್ತು ಜಿಲ್ಲೆಯ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ನ.14ರಿಂದ 20ರ ವರೆಗೆ ಅ.ಭಾ. ಸಹಕಾರ ಸಪ್ತಾಹ ನಡೆಯಲಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಕಾರ‍್ಯಕ್ರಮದ ಮಾಹಿತಿ ನೀಡಿದ ಅವರು, ‘ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ’ ಧ್ಯೇಯವಾಕ್ಯದಡಿ ಜಿಲ್ಲಾದ್ಯಂತ ಸಹಕಾರ ಸಪ್ತಾಹ ಆಯೋಜಿಸಲಾಗುತ್ತಿದೆ. ಸಹಕಾರ ಚಳವಳಿಯ ಸಾಧನೆ ಮತ್ತು ವೈಫಲ್ಯಗಳನ್ನು ವಿಮರ್ಶಿಸಿ ಮುಂದಿನ ವರ್ಷಕ್ಕೆ ಗುರಿ ಇರಿಸಿಕೊಂಡು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ನ.14ರಂದು ಬೆಳಿಗ್ಗೆ 10 ಗಂಟೆಗೆ ಕರಾವಳಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಸಹಕಾರದೊಂದಿಗೆ ಕಲ್ಯಾಣಪುರ ವೃಂದಾವನ ಸಭಾಂಗಣದಲ್ಲಿ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು. ‘ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಆಶಯದಲ್ಲಿ ನಡೆಯುವ ಕಾರ‍್ಯಕ್ರಮವನ್ನು ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸುವರು. ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಯಶಪಾಲ್ ಸುವರ್ಣ ಮೊದಲಾದವರು ಅಭ್ಯಾಗತರಾಗಿ ಆಗಮಿಸುವರು.
ನ.15ರಂದು ಕೋಟೇಶ್ವರ, 16ರಂದು ಕೋಟ, 17ರಂದು ಬಜಗೋಳಿ, 18ರಂದು ಪಡುಬಿದ್ರಿ ಮತ್ತು ಬೈಂದೂರು, 19ರಂದು ಕೋಟೇಶ್ವರದಲ್ಲಿ ಸಹಕಾರ ಸಪ್ತಾಹ ನಡೆಯಲಿದ್ದು, 20ರಂದು ಮಂಗಳೂರಿನಲ್ಲಿ ದ.ಕ. ಕೇಂದ್ರ ಸಹಕಾರ ಬ್ಯಾಂಕ್ ಸಹಯೋಗದೊಂದಿಗೆ ಸಮಾರೋಪ ನಡೆಯಲಿದೆ ಎಂದು ಜಯಕರ ಶೆಟ್ಟಿ ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಯೂನಿಯನ್ ನಿರ್ದೇಶಕರಾದ ವೈ.ಸುಧೀರ್ ಕುಮಾರ್ ಮತ್ತು ಶ್ರೀಧರ ಪಿ.ಎಸ್. ಮತ್ತು ಸಿಇಓ ಅನುಷಾ ಕೋಟ್ಯಾನ್ ಇದ್ದರು.