ಚಾಲಕನಿಗೆ ಕಡಿಮೆಯಾದ ರಕ್ತದೊತ್ತಡ: ಅಂಗಡಿಗೆ ನುಗ್ಗಿದ ಕಾರು, ತಪ್ಪಿದ ದುರಂತ
ಉಳ್ಳಾಲ: ದೇರಳಕಟ್ಟೆ ಮಸೀದಿ ಎದುರು ಭಾಗದ ಚತುಷ್ಪಥ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹಣ್ಣಿನ ಅಂಗಡಿಗೆ ಡಿಕ್ಕಿ ಹೊಡೆದಿದ್ದು, ಬೆಳಗ್ಗೆ ಅಂಗಡಿಯಲ್ಲಿ ಗ್ರಾಹಕರಿಲ್ಲದೆ ಇದ್ದ ಕಾರಣ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.
ಘಟನೆ ಶನಿವಾರ ನಡೆದಿದ್ದು, ಮಂಗಳೂರು ಕಡೆಯಿಂದ ನಾಟೆಕಲ್ ಕಡೆ ಸಂಚರಿಸುತ್ತಿದ್ದ ಕಾರು ಚಾಲಕನಿಗೆ ರಕ್ತದೊತ್ತಡ ಕಡಿಮೆಯಾದ ಕಾರಣ ಚಾಲಕ ಎದುರು ಸಂಚರಿಸುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯುವ ಬದಲು ಕಾರನ್ನು ಎಡಕ್ಕೆ ತೆಗೆದಿದ್ದು, ಕಾರು ನಿಯಂತ್ರಣ ತಪ್ಪಿ ನೇರವಾಗಿ ಹಣ್ಣಿನ ಅಂಗಡಿಗೆ ಡಿಕ್ಕಿ ಹೊಡೆದಿದೆ.
ಬೆಳಗ್ಗೆ ಅಂಗಡಿ ತೆರೆದು ಮಾಲಕ ಹಣ್ಣು ಹಂಪಲು ಹೊರಗಡೆ ಇಡುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದರಿಂದ ಅಂಗಡಿಯಲ್ಲಿ ಗ್ರಾಹಕರು ಇರಲಿಲ್ಲ. ಘಟನೆ ಸಂದರ್ಭದಲ್ಲಿ ಅಂಗಡಿ ಮಾಲಕ ಮತ್ತು ಕಾರಿನ ಚಾಲಕ ಯಾವುದೇ ಅವಘಡ ಇಲ್ಲದೆ ಪಾರಾಗಿದ್ದಾರೆ.
ಈ ರಸ್ತೆ ಬದಿಯಲ್ಲಿ ಬೆಳಗ್ಗಿನ ಹೊತ್ತು ಸ್ಥಳೀಯ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಘಟನೆ ನಡೆದ ಸಂದರ್ಭದಲ್ಲಿ ಯಾರು ಇರಲಿಲ್ಲ. ಘಟನೆಯಲ್ಲಿ ಅಂಗಡಿಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ.
ಸ್ಥಳೀಯರು ಆಗಮಿಸಿ ಕಾರನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದು, ಯಾವುದೇ ಪ್ರಕರಣ ದಾಖಲಿಸಿಲ್ಲ.