Hassan: ವಿಕ್ರಂ ಸಿಂಹ ವಿಚಾರಣೆಗೆ ಕೋರ್ಟ್ ಅನುಮತಿ ಕೇಳಿದ ಅರಣ್ಯ ಇಲಾಖೆ
ಹಾಸನ: ‘ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿಯ ೧೦ ಎಕರೆ ಪ್ರದೇಶದಲ್ಲಿ ೧೨೬ ಮರಗಳನ್ನು ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ವಿಚಾರಣೆ ನಡೆಸಲು ಬೇಲೂರು ಜೆಎಂಎಫ್‌ಸಿ ಕೋರ್ಟ್‌ನ ಅನುಮತಿ ಕೋರಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗ್ರಾಮದ ಜಯಮ್ಮ ಎಂಬವರಿಂದ ೩ ಎಕರೆ ೧೦ ಗುಂಟೆ ಜಮೀನನ್ನು ವಿಕ್ರಂ ಸಿಂಹ ಗುತ್ತಿಗೆಗೆ ಪಡೆದಿದ್ದಾರೆ. ಜನವರಿ ೧ ರಿಂದ ಒಂದು ವರ್ಷದ ಅವಧಿಗೆ ಶುಂಠಿ ಬೆಳೆಯಲು ಎಕರೆಗೆ ?೫೫ ಸಾವಿರದಂತೆ ಕರಾರು ಮಾಡಿಕೊಂಡಿದ್ದಾರೆ. ಆ ಜಮೀನು ಸೇರಿದಂತೆ ಸುತ್ತಲಿನ ೧೦ ಎಕರೆ ಪ್ರದೇಶದಲ್ಲಿದ್ದ ಬೆಲೆಬಾಳುವ ಮರಗಳನ್ನು ಕಡಿದು ಹಾಕಲಾಗಿತ್ತು. ಡಿ.೧೭ ರಂದು ಭೇಟಿ ನೀಡಿದ್ದ ಬೇಲೂರು ತಹಶೀಲ್ದಾರ್ ಮಮತಾ ಅದನ್ನು ಗಮನಿಸಿದ್ದರು. ನಂತರ ಜಯಮ್ಮ ಹಾಗೂ ರಾಕೇಶ್ ಶೆಟ್ಟಿ ಮತ್ತು ಇತರರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು ಎಂದು ಮೂಲಗಳು ತಿಳಿಸಿವೆ.
‘ವಿಕ್ರಂ ಸಿಂಹ ಅವರೇ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಕೂಲಂಕಷ ತನಿಖೆ ನಡೆಸಲು ವಿಚಾರಣೆ ಅಗತ್ಯ. ವ್ಯಕ್ತಿಯೊಬ್ಬರು ಸ್ಥಳದಲ್ಲಿ ಖುದ್ದು ಹಾಜರಿದ್ದು ಮರಗಳನ್ನು ಕಡಿಸಿರುವುದಾಗಿ ಸ್ಥಳೀಯರು ತಿಳಿಸಿದ್ದು, ಅವರಿಗಾಗಿ ಶೋಧ ನಡೆದಿದೆ. ಅವರ ಬಂಧನವಾದಲ್ಲಿ, ನಿಜವಾದ ಆರೋಪಿಗಳು ಯಾರೆಂದು ಪತ್ತೆಯಾಗಲಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಅನುಮತಿಗಾಗಿ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಇನ್ನೆರಡು ದಿನದಲ್ಲಿ ಆದೇಶ ಹೊರಬೀಳುವ ಸಾಧ್ಯತೆ ಇದೆ. ಅದನ್ನ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.