Mangalore: ಹುಸಿ ಬಾಂಬ್ ಬೆದರಿಕೆ: ಪ್ರಕರಣ ದಾಖಲು
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಹುಸಿ ಬಾಂಬ್ ಬೆದರಿಕೆಯ
ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗು ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ ಹುಸಿ ಬಾಂಬ್ ಬಗ್ಗೆ ಇ ಮೇಲ್ ಕಳುಹಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿ.೨೬ರಂದು ಮಧ್ಯರಾತ್ರಿ ೧೨ ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಸಂದೇಶ xonocikonoci10@beeble.com ಎಂಬ ಮೇಲ್ ಐಡಿಯಿಂದ ವಿಮಾನ ನಿಲ್ದಾಣಕ್ಕೆ ಬಂದಿದೆ. ಮಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ಇದೇ ರೀತಿಯ ಸಂದೇಶ ರವಾನೆಯಾಗಿತ್ತು.
ಡಿ.೨೭ ರಂದು ಬೆಳಗ್ಗೆ ೧೧ ಗಂಟೆಗೆ ಇ ಮೇಲ್ ಬಂದ ಮಾಹಿತಿ ತಿಳಿದ ವಿಮಾನ ನಿಲ್ದಾಣ ಅಧಿಕಾರಿಗಳು ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಹುಸಿ ಬಾಂಬ್ ಬೆದರಿಕೆ ಎಂದು ಗೊತ್ತಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಇ ಮೇಲ್ ಸಂದೇಶದಲ್ಲಿ, ‘ನಾವು ‘FUNING’ ಎಂಬ ಉಗ್ರಗಾಮಿ ಸಂಘಟನೆಯವರಾಗಿದ್ದು, ನಿಮ್ಮಲ್ಲಿಗೆ ಬರುತ್ತಿರುವ ವಿಮಾನವೊಂದರಲ್ಲಿ ಬಾಂಬ್ ಇಟ್ಟಿದ್ದೇವೆ. ಆ ಬಾಂಬ್ ನಿಮ್ಮ ವಿಮಾನ ನಿಲ್ದಾಣ ಒಳಗೂ ಇರಬಹುದು. ಬಾಂಬ್‌ನ ಗುಪ್ತ ಜಾಗದಲ್ಲಿ ಇರಿಸಲಾಗಿದ್ದು, ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಗೊಳ್ಳಲಿದೆ. ನಿಮ್ಮನ್ನೆಲ್ಲ ಕೊಂದು ಹಾಕುತ್ತೇವೆ’ ಎಂದು ಇ ಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ.
ಈ ವಿಚಾರ ಗಮನಕ್ಕೆ ಬಂದ ಕೂಡಲೇ ವಿಮಾನ ನಿಲ್ದಾಣ ಮತ್ತು ಪರಿಸರದಲ್ಲಿ ಬಿಗು ತಪಾಸಣೆ ನಡೆಸಲಾಗಿದೆ. ಹೆಚ್ಚುವರಿ ತಪಾಸಣೆಗೆ ಚೆಕ್ ಪೋಸ್ಟ್ ಹಾಕಲಾಗಿದೆ. ವಿಮಾನ ನಿಲ್ದಾಣದ
ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಜತೆ ಬಜಪೆ ಠಾಣಾ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಅದಾನಿ ಕಂಪನಿ ಅಧಿಕಾರಿಗಳು ನೀಡಿದ ದೂರಿನಂತೆ ನ್ಯಾಯಾಲಯದ ಅನುಮತಿ ಪಡೆದು ಐಪಿಸಿ ೫೦೭ ಅಡಿ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.