Putturu: ತಹಶೀಲ್ದಾರ್‌ರಿಂದ ನಿಯಮಬಾಹಿರ ಕ್ರಮ: ಮಹಿಳೆ ಆರೋಪ
ಪುತ್ತೂರು: ಸತ್ಯ ವಿಚಾರವನ್ನು ಪರಿಶೀಲನೆ ಮಾಡದೆ ನಿಯಮ ಪ್ರಕಾರ ನೋಟೀಸು ನೀಡದೆ ನಮ್ಮ ಸ್ವಾಧೀನದಲ್ಲಿದ್ದ ಜಾಗಕ್ಕೆ ಅಳವಡಿಕೆ ಮಾಡಲಾದ ಬೇಲಿ ಹಾಗೂ ಗೇಟ್ ನ್ನು ಪುತ್ತೂರು ತಹಶೀಲ್ದಾರ್ ಅವರು ಜೆಸಿಬಿ ಮೂಲಕ ತೆರವುಗೊಳಿಸಿದ್ದಲ್ಲದೆ ಅದರಲ್ಲಿದ್ದ ಕೃಷಿಗೆ ಹಾನಿ ಮಾಡಿದ್ದಾರೆ. ಇದರಿಂದ ಸುಮಾರು ರೂ.೬ ಲಕ್ಷ ನಷ್ಟ ಉಂಟಾಗಿದ್ದು, ನನಗೆ ಈ ವಿಚಾರದಲ್ಲಿ ನ್ಯಾಯ ಒದಗಿಸಬೇಕು ಎಂದು ಕೆಮ್ಮಿಂಜೆ ಗ್ರಾಮದ ಕೊಂಬೆರೊಟ್ಟು ನಿವಾಸಿ ಜಯಲತಾ ರೈ ಅವರು ಅಳವತ್ತುಕೊಂಡಿದ್ದಾರೆ.
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಮ್ಮಿಂಜೆ ಗ್ರಾಮದ ಸ.ನಂಬ್ರ ೧೩/೪,೧೩/೫,೧೦/೭ ಹಾಗೂ ೧೦/೮ ನಮ್ಮ ಸ್ವಂತ ಜಾಗವಾಗಿದ್ದು, ಹಿರಿಯರ ಕಾಲದಿಂದಲೂ ಸ್ವಾಧೀನದಲ್ಲಿದ್ದು ಕೃಷಿ ಕ್ರತಾವಳಿ ಮಾಡಿಕೊಂಡು ಬಂದಿದ್ದೇವೆ. ಅದರಲ್ಲಿ ಮನೆಯನ್ನು ನಿರ್ಮಿಸಿಕೊಂಡು ವಾಸ್ತವ್ಯವಿದ್ದೇವೆ. ಹೀಗಿದ್ದರೂ ನೆರೆಯವರಾದ ಪರಮೇಶ್ವರ,ಶೀನಪ್ಪ,ಕೃಷ್ಣಪ್ಪ ಮತ್ತು ರಾಮು ಎಂಬವರ ಸುಳ್ಳು ದೂರಿನ ಮೇರೆಗೆ ನಿಜಾಂಶವನ್ನು ಪರಿಗಣಿಸದೆ ತಹಶೀಲ್ದಾರರು ಈ ಕ್ರಮ ಕೈಗೊಂಡಿದ್ದಾರೆ. ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಹಿರಿಯ ನಾಗರಿಕಳಾದ ಹಾಗೂ ಒಬ್ಬಂಟಿ ವಾಸ್ತವ್ಯ ಹೊಂದಿರುವ ನನಗೆ ಅನ್ಯಾಯವಾಗಿದೆ ಎಂದು ಅಳವತ್ತುಕೊಂಡರು.
ನಮಗೆ (ಅಣ್ಣನ ಹೆಸರಿನಲ್ಲಿ) ಅಕ್ರಮಸಕ್ರಮದಲ್ಲಿ ೨೦೦೭ರಲ್ಲಿ ಮಂಜೂರಾದ ೩೮ ಸೆಂಟ್ಸ್ ಮತ್ತು ೫೬ ಸೆಂಟ್ಸ್ ಜಾಗದಲ್ಲಿ ರಸ್ತೆಯೇ ಇರಲಿಲ್ಲ. ಯಾರೇ ಅಧಿಕಾರಿಗಳು ಬೇಕಾದರೂ ಭೂದಾಖಲೆ ಪರಿಶೀಲಿಸಬಹುದು. ಪೊಲೀಸರ ಉಪಸ್ಥಿತಿಯಲ್ಲಿ ಜಾಗದ ಅಳತೆ ಕೂಡ ಮಾಡಲಾಗಿದೆ. ಪರಮೇಶ್ವರ ಅವರ ಮನೆಗೆ ಹೋಗಲು ಪ್ರತ್ಯೇಕ ಪಂಚಾಯಿತಿ ರಸ್ತೆ ಇದ್ದು, ಇದೀಗ ಅದನ್ನು ಮುಚ್ಚಲಾಗಿದೆ. ಅದೇ ಪಂಚಾಯಿತಿ ರಸ್ತೆಯ ಮೂಲಕ ಉಳಿದ ಮೂರು ಮನೆಗಳ ಸಂಪರ್ಕಕ್ಕೂ ವ್ಯವಸ್ಥೆ ಮಾಡಬಹುದಾಗಿದೆ. ಆದರೆ ಪಂಚಾಯಿತಿ ರಸ್ತೆಯನ್ನು ಮುಚ್ಚಿ ಇದೀಗ ಇದೀಗ ನಮ್ಮ ಜಾಗದಲ್ಲಿ ನಾವಿಲ್ಲದ ಸಂದರ್ಭದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ರಸ್ತೆಯನ್ನೇ ಸಾರ್ವಜನಿಕ ರಸ್ತೆ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ದೂರಿದರು.
ಈ ಕ್ರಮದ ಕುರಿತು ಮೇಲಧಿಕಾರಿಗಳಿಗೆ ದೂರು ನೀಡುತ್ತೇನೆ. ಮೇಲಧಿಕಾರಿಗಳು ಸಂಬಂಧಪಟ್ಟ ಜಾಗದ ದಾಖಲೆಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಿಕೊಡುವರೆಂಬ ಭರವಸೆ ಇಟ್ಟುಕೊಂಡಿದ್ದೇನೆ ಎಂದ ಅವರು ಸಂಘಟನೆಯ ಹೆಸರಿನಲ್ಲಿ ಹಿರಿಯ ನಾಗರಿಕ ಮಹಿಳೆಯಾಗಿರುವ ನನಗೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.