Udupi: ಕುವೆಂಪು ಸಾಹಿತ್ಯದ ಪರಿಕಲ್ಪನೆಯಿಂದ ಉತ್ತಮ ಸಮಾಜ ನಿರ್ಮಾಣ
ಉಡುಪಿ: ಇಡೀ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಪರಿಕಲ್ಪನೆಯನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು
ಶುಕ್ರವಾರ ನಗರದ ಸರಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಶ್ರೇಷ್ಠ ಕವಿ. ಅವರು ತಮ್ಮ ಆಲೋಚನೆಗಳನ್ನು ಸಾಹಿತ್ಯ ಹಾಗೂ ಕೃತಿಗಳ ಮೂಲಕ ಸಮಾಜಕ್ಕೆ ನೀಡಿದ್ದು, ಅವರ ಬರಹಗಳು ಹಲವಾರು ಸಾಮಾಜಿಕ ಸುಧಾರಣೆ ತಂದಿದೆ. ದುಂದು ವೆಚ್ಚ ರಹಿತ ಮದುವೆಯ ಮಂತ್ರಮಾಂಗಲ್ಯ ಪರಿಚಯಿಸಿದ್ದಾರೆ. ಅವರು ರಚಿಸಿದ ನಾಡಗೀತೆಯ ಮೂಲಕ ಅವರನ್ನು ನಿತ್ಯ ನೆನೆಯುತ್ತಿದ್ದೇವೆ. ಸಾಹಿತ್ಯ ಲೋಕದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕರುನಾಡಿಗೆ ತಂದುಕೊಟ್ಟ ಶ್ರೇಷ್ಠ ಕವಿ ಕುವೆಂಪು ಎಂದರು.
ಮಾನವನನ್ನು ವಿಶ್ವ ಮಾನವ ಮಾಡಬೇಕೆನ್ನುವುದು ಕುವೆಂಪು ಕನಸಾಗಿದ್ದು, ಪ್ರತಿಯೊಬ್ಬರಲ್ಲೂ ಇರುವ ವ್ಯಕ್ತಿ ಸ್ವಾತಂತ್ರ್ಯ ಗೌರವಿಸಬೇಕು ಎನ್ನುವುದು ಅದರ ನಿಯಮ. ಆದ್ದರಿಂದ ಅವರು ಹುಟ್ಟಿದ ದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಡಾ| ಪ್ರಜ್ಞಾ ಮಾರ್ಪಳ್ಳಿ ಅವರು ಕುವೆಂಪು ಕುರಿತು ಉಪನ್ಯಾಸ ನೀಡಿ, ಕುವೆಂಪು ಸಾಹಿತ್ಯದ ಬರಹಗಳಲ್ಲಿನ ಸಾಮರ್ಥ್ಯ ಅರಿತು ಪರಿಪೂರ್ಣ ಬದುಕು ಕಟ್ಟಿಕೊಂಡಾಗ ಕುವೆಂಪು ಅವರ ವಿಶ್ವಮಾನವ ಕನಸು ಈಡೇರುತ್ತದೆ. ಮನುಷ್ಯ ಕರ್ತವ್ಯದೊಂದಿಗೆ ತನ್ನ ಜೀವನವನ್ನು ಹೇಗೆ ಆದರ್ಶವಾಗಿಟ್ಟುಕೊಳ್ಳಬೇಕು ಎಂಬುದನ್ನು ಅವರ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಕಾಣಬಹುದು ಎಂದರು.
ವಿಶ್ವ ಮಾನವತೆ ಕಡೆಗೆ ಬದುಕಿನ ಪಥ ಸಾಗಬೇಕು. ನಮ್ಮ ಆಲೋಚನೆಗಳು ಪೂರ್ಣ ಪ್ರಮಾಣದಲ್ಲಿ ತಂತ್ರಜ್ಞಾನಕ್ಕೆ ತಲೆಬಾಗಬಾರದು. ತ್ಯಾಗ, ಪ್ರೀತಿ, ಕರುಣೆ, ಸ್ಪಂದಿಸುವ ಮನೋಭಾವ ಬೆಳೆಸಿಕೊಂಡಾಗ ವ್ಯಕ್ತಿ ಮಾನವನಾಗುತ್ತಾನೆ. ವರ್ಣ ರಹಿತ, ವರ್ಗ ರಹಿತ, ಜಾತಿ ಮೀರಿದ ಸಮಾಜ ನಿರ್ಮಾಣ ಮಾಡಬೇಕೆನ್ನುವುದು ಕುವೆಂಪು ಕನಸಾಗಿದ್ದು, ಅದನ್ನು ಈಡೇರಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಕುವೆಂಪು ಅವರ ಭಾವಗೀತೆ ಹಾಗೂ ಅವರ ಕುರಿತು ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಹಾವಂಜೆ ವಿನಯ ಬಾಬುರಾಜ್ ಮತ್ತು ತಂಡದವರಿಂದ ಹಾಗೂ ದಿನೇಶ್ ಹಾವಂಜೆ ಅವರಿಂದ ಗೀತ ಗಾಯನ ಮತ್ತು ಜಾಹ್ನವಿ ಅವರಿಂದ ಕೊಳಲು ವಾದನ ನಡೆಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಕೆ., ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ನರಸಿಂಹಮೂರ್ತಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ| ಸುಮಾ ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಭಟ್ ನಿರೂಪಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ ವಂದಿಸಿದರು.