Bantwal: ಧಾರ್ಮಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ದೇಶದ ವೈಶಿಷ್ಟ್ಯ
ಬಂಟ್ವಾಳ: ಧಾರ್ಮಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ನಮ್ಮ ದೇಶದ ವೈಶಿಷ್ಟ್ಯವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಧರ್ಮ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕಾರ್ಯ ಯುವಶಕ್ತಿಯ ಮೂಲಕ ಆಗಬೇಕಿದ್ದು, ಈ ದೆಸೆಯಲ್ಲಿ ಹಿರಿಯರ ಮಾರ್ಗದರ್ಶನದಿಂದ ಯುವ ಶಕ್ತಿಯಿಂದ ಭವ್ಯ ದೇವಸ್ಥಾನ ನಿರ್ಮಾಣವಾಗಿದೆ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ. ಮೋಹನ ಆಳ್ವ ಹೇಳಿದ್ದಾರೆ.
ಫರಂಗಿಪೇಟೆಯ ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆಯುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ೩ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಮನುಷ್ಯನ ಹುಟ್ಟು ದೇವರ ವರವಾಗಿದೆ. ನಿಷ್ಕಲ್ಮಶ ಮನಸ್ಸಿನಿಂದ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು, ದೇವಸ್ಥಾನದ ಬ್ರಹ್ಮಕಲಶದೊಂದಿಗೆ ಆತ್ಮವನ್ನು ಶುದ್ದಿಕರಣ ಮಾಡಿ ದೇವಸ್ಥಾನವನ್ನು ನಿರಂತರವಾಗಿ ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇ ಗೌಡ, ಶ್ರೀ ಕೃಷ್ಣ ನಿವಾಸ ಹಾಲೂರಿನ ಕೆ. ವೆಂಕಟ್ರಾಯ, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರ, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಪ್ರಭಾಕರ್ ಮಾಸ್ಟರ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರ. ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಮನೋಜ್ ತುಪ್ಪಕಲ್ಲು, ದೇವಸ್ಥಾನ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಜಯರಾಮ ಕೊಟ್ಟಾರಿ ಉಪಸ್ಥಿತರಿದ್ದರು.
ಗೋಪಾಲ್ ಗೋವಿಂತೋಟ ಸ್ವಾಗತಿಸಿದರು. ಪವನ್ ಕುಮಾರ್ ಅಬ್ಬೆಟ್ಟು ವಂದಿಸಿ, ದಿನೇಶ ಸುವರ್ಣರಾಯಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ ಬೆಂಗಳೂರು ಇವರ ನೃತ್ಯ ವೈವಿದ್ಯ ಹಾಗೂ ತುಳು ಪೌರಾಣಿಕ ನಾಟಕ ನಡೆಯಿತು.