Chikkamagaluru: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾಗಿದೆ: ಬಿ. ಪುಷ್ಪಾಂಜಲಿ

Chikkamagaluru: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾಗಿದೆ: ಬಿ. ಪುಷ್ಪಾಂಜಲಿ

 ರಾಷ್ಟ್ರೀಯ ಮತದಾನ ದಿನಾಚರಣೆ


ಚಿಕ್ಕಮಗಳೂರು: ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದದು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ. ಪುಷ್ಪಾಂಜಲಿ ಹೇಳಿದರು.

ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನ ಪ್ರತಿಯೊಬ್ಬರ ಪ್ರಮುಖ ಹಕ್ಕು ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಪ್ರಜೆಗಳ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮ, ತಮ್ಮ ಒಳಿತು ಬಯಸುವ ಜನನಾಯಕನನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ನಡೆಯುತ್ತದೆ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದರು.

ರಾಷ್ಟ್ರೀಯ ಮತದಾರರ ದಿನವನ್ನು 2011ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಅಂದಿನ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಅವರು ಭಾರತದ ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿದರು ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 18 ವರ್ಷ ಪೂರೈಸಿದ ಪ್ರತಿಯೊಬ್ಬ ಯುವಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಕ್ರಮ ವಹಿಸಲಾಗಿದೆ. ಯಾರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಲ್ಲ ಅವರು ತಾಲ್ಲೂಕು ಕಛೇರಿ, ತಮ್ಮ ವ್ಯಾಪ್ತಿಯ ಮತಗಟ್ಟೆಯ ಬಿಎಲ್‌ಒಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕಲ್ಲದೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಬೇರೆ ಯಾವುದೇ ದೇಶದಲ್ಲಿ ಈ ರೀತಿಯ ಚುನಾವಣೆ ಪ್ರಕ್ರಿಯೆ ಇಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಯುವ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಮತದಾನದ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುವ ಮೂಲಕ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬೇರೆ ರಾಷ್ಟ್ರಗಳಿಗೂ ಕೂಡ ಸ್ವಾತಂತ್ರ್ಯ ಬಂದಿತ್ತು. ಆದರೆ ಆರ್ಥಿಕ, ರಾಜಕೀಯ, ಆಡಳಿತ ಪರಿಸ್ಥಿತಿಗಳನ್ನು ಅವಲೋಕಿಸಿದಾಗ ಭಾರತಕ್ಕಿಂತ ತುಂಬಾ ಹಿಂದುಳಿದಿರುವುದು ಕಂಡು ಬರುತ್ತದೆ. ಜಿ.ಡಿ.ಪಿ.ಯಲ್ಲಿ ಇಡೀ ವಿಶ್ವದಲ್ಲಿ 3ನೇ ಸ್ಥಾನ ಹೊಂದಿರುವ ರಾಷ್ಟ್ರ ನಮ್ಮದು ಎಂದ ಅವರು ಶಾಂತಿ, ಸಮೃದ್ಧಿ, ಸುವ್ಯವಸ್ಥೆ ನಮ್ಮ ದೇಶದಲ್ಲಿ ಮನೆ ಮಾಡಿದೆ ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ  ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಿದರು.

ಮತದಾನ ನಮ್ಮ ಹಕ್ಕಾಗಿದ್ದು, ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮರನ್ನು ಆಯ್ಕೆ ಮಾಡುವಂತೆ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಎ.ಎಸ್. ಮಾತನಾಡಿದರು.

ರಾಷ್ಟ್ರೀಯ ಮತದಾರರ ದಿನದ ಕುರಿತು ಏರ್ಪಡಿಸಲಾಗಿದ್ದ ಭಾಷಣ, ಪ್ರಬಂಧ ಸ್ಪರ್ಧೆ ಹಾಗೂ ಕಿರುಚಿತ್ರ, ಭಿತ್ತಿಪತ್ರ ಹಾಗೂ ಭಾಷಣ ಸ್ಪಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಚಿಕ್ಕಮಗಳೂರು ತಾಲ್ಲೂಕು ತಹಸೀಲ್ದಾರ್ ಡಾ. ಸುಮಂತ್ ಮತ್ತಿತರರು ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article