Mangalore: ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ
Thursday, January 25, 2024
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 42ನೇ ಡೊಂಗರಕೇರಿ ವಾರ್ಡಿನ ಅಳಕೆ ವೆಟ್‌ವೆಲ್ ಬಳಿ ಗೈಲ್ ಗ್ಯಾಸ್ ಅವರ ಸಿ.ಎಸ್.ಆರ್. ಅನುದಾನದಡಿ 23 ಲಕ್ಷ ರೂ. ವೆಚ್ಚದಲ್ಲಿ ಪೌರಕಾರ್ಮಿಕರಿಗಾಗಿ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯದ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ನೇತೃತ್ವದಲ್ಲಿ ನಡೆಯಿತು.
ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ಮಂಗಳೂರು ಸೇರಿದಂತೆ ಪ್ರತೀ ನಗರಗಳ ನೈರ್ಮಲ್ಯ ಹಾಗೂ ಸುಂದರ ಪರಿಸರಕ್ಕೆ ಪೌರಕಾರ್ಮಿಕರ ಕೊಡುಗೆ ಬಹಳಷ್ಟಿದೆ. ಅಂತಹ ಕಾರ್ಮಿಕರಿಗೆ ನಿರಂತರ ಕಾರ್ಯದೊತ್ತಡದ ನಡುವೆ ಒಂದಷ್ಟು ವಿಶ್ರಾಂತಿಯ ಅಗತ್ಯವಿದೆ. ಇದನ್ನು ಮನಗಂಡು ಪ್ರಸ್ತುತ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೈಲ್ ಗ್ಯಾಸ್ ಅವರಿಂದ ಸಿ.ಎಸ್.ಆರ್. ಅನುದಾನದಡಿಯಲ್ಲಿ ಈ ವಿಶೇಷ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಇಂತಹದೇ ಇನ್ನೂ ಮೂರ್ನಾಲ್ಕು ಯೋಜನೆಗಳು ಜಾರಿಯಾಗಲಿವೆ. ಅವೆಲ್ಲವೂ ಶೀಘ್ರದಲ್ಲಿ ಪೌರಕಾರ್ಮಿಕರ ಉಪಯೋಗಕ್ಕೆ ಸಿಗುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಮೇಯರ್ ಸುನಿತಾ, ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ, ಪೂರ್ಣಿಮಾ, ರಾಜೇಂದ್ರ ಕುಮಾರ್, ರಮೇಶ್ ಹೆಗ್ಡೆ, ಗೈಲ್ ಗ್ಯಾಸ್ ಹಾಗೂ ಪಾಲಿಕೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.


