Mangalore: ಪ್ರಜಾಪ್ರಭುತ್ವದ ಯಶಸ್ಸಿಗೆ ಯೋಚಿಸಿ ಮತದಾನ ಮಾಡಿ: ಜಿಲ್ಲಾ ನ್ಯಾಯಾಧೀಶರು

Mangalore: ಪ್ರಜಾಪ್ರಭುತ್ವದ ಯಶಸ್ಸಿಗೆ ಯೋಚಿಸಿ ಮತದಾನ ಮಾಡಿ: ಜಿಲ್ಲಾ ನ್ಯಾಯಾಧೀಶರು


ಮಂಗಳೂರು: ಯಾವುದೇ ರೀತಿಯಿಂದಾದರೂ ಅಧಿಕಾರಕ್ಕೆ ಬರಬೇಕು ಎಂಬ ಹಿಂದಿನ ರಾಜಕಾರಣದ ಮನಸ್ಥಿತಿಯನ್ನು ಹೋಗಲಾಡಿಸಲು, ಪ್ರತಿಯೊಂದು ಪ್ರಜೆಗಳು ಯೋಚಿಸಿ ಮತದಾನ ಮಾಡಬೇಕೆಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಹೇಳಿದರು.

ಅವರು ಗುರುವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದ ಅಡಿಪಾಯ ನಿಂತಿರುವುದೇ ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸುವುದರ ಮೇಲೆ, ದೇಶದ ಒಳಿತಿಗಾಗಿ ಪ್ರಜೆಗಳು ತಮ್ಮ ಮತವನ್ನು ಚಲಾಯಿಸುವ ಮುನ್ನ ಸಾಕಷ್ಟು ಯೋಚಿಸಿ ಮತದಾನ ಮಾಡಬೇಕು. ಇದು ಮುಂದಿನ ಉತ್ತಮ ಆಡಳಿತ ನಿರ್ವಹಣೆಗೆ ಸಹಕಾರಿಯಾಗಬಲ್ಲದು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಸ್ಥಾಪಿಸಲು ನಮ್ಮ ಹಿರಿಯರು ಮಾಡಿದ ತ್ಯಾಗ ಹಾಗೂ ಶ್ರಮವನ್ನು ಅರಿತುಕೊಳ್ಳಬೇಕು. ದೇಶದ ವೈವಿಧ್ಯಮಯ ಪರಂಪರೆ, ಆಚರಣೆಗಳನ್ನು ಅಧ್ಯಯನ ಮಾಡಿ ಸಂವಿಧಾನ ರೂಪಿಸಲಾಗಿದೆ. ನಾವು ಕೇವಲ ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರು ಆಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾತನಾಡಿ, ದೇಶ ಸ್ವಾತಂತ್ರ್ಯಗೊಂಡ ಆರಂಭದಲ್ಲೇ ಸಾರ್ವತ್ರಿಕ ಮತದಾನದ ಹಕ್ಕು ನೀಡಿದ ದೇಶ ನಮ್ಮದು. ಹಿಂದೆ ಉಳ್ಳವರಿಗೆ ಮಾತ್ರ ಮತದಾನದ ಹಕ್ಕು ಇತ್ತು, ಆದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಮತ ಚಲಾಯಿಸುವ ಹಕ್ಕು ದೊರೆತಿದೆ. ಯಾವುದೇ ಆಮಿಷಕ್ಕೆ ಒಳಗಾಗದೆ ಸಮಾಜದ ಬಗ್ಗೆ ಕಾಳಜಿ ವಹಿಸಿ ಮತದಾನ ಮಾಡಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರು ಮಾತನಾಡಿ, ಸ್ವೀಪ್ ಕಾರ್ಯಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿತ್ತಿ ಪತ್ರ ಹಾಗೂ ಸ್ವೀಪ್ ಕ್ರಿಯಾಯೋಜನೆ ಪುಸ್ತಕ ಬಿಡುಗಡೆ ಮಾಡಲಾಯಿತು. ಮತದಾನ ಮತ್ತು ಚುನಾವಣೆ ಪ್ರಕ್ರಿಯೆ ಕುರಿತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾವಿಧಿ ಭೋದಿಸಲಾಯಿತು. ಸ್ವೀಪ್ ಚಟುವಟಿಕೆಯಲ್ಲಿ ಅತ್ಯುನ್ನತ ಸಾಧನೆಗೈದ ಉಪನ್ಯಾಸಕಿ ಪ್ರಮೀಳ ರೈ ಅವರನ್ನು ಸನ್ಮಾನಿಸಲಾಯಿತು.

ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಉಪ ಆಯುಕ್ತ ಗಿರೀಶ್ ನಂದನ್, ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ್ ಭಂಡಾರಿ ಎಂ. ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article