Hassan: ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಲಿಂಗೇಗೌಡರ ಹೆಸರು ಸೂಚಿಸಿದ ಬಿ. ಶಿವರಾಂ
ಹಾಸನ: ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಹೆಸರನ್ನು ಲೋಕಸಭೆ ಚುನಾವಣೆಗೆ ಸೂಚಿಸುವ ಮೂಲಕ ಅವರನ್ನೇ ಅಭ್ಯರ್ಥಿಯನ್ನಾಗಿಸಲು ಕಾಂಗ್ರೆಸ್‌ನ ಒಂದು ಗುಂಪು ಪ್ರಯತ್ನಿಸುತ್ತಿದೆ. ಟಿಕೆಟ್ ಆಕಾಂಕ್ಷಿಯಾಗಿರುವ, ಮಾಜಿ ಸಚಿವ ಬಿ. ಶಿವರಾಂ ಅವರೇ ಇದನ್ನು ಬಹಿರಂಗಪಡಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಭಿವೃದ್ಧಿ ಕಾಮಗಾರಿಗಳು ಆ ಕ್ಷೇತ್ರಕ್ಕಷ್ಟೇ ಸೀಮಿತವಾಗಿವೆ. ಇನ್ನೊಂದೆಡೆ ನಿಗಮ-ಮಂಡಳಿಯ ನೇಮಕಾತಿಯಲ್ಲೂ ಶಿವಲಿಂಗೇಗೌಡರ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತಿದೆ. ಹೀಗಾದರೆ, ನಮ್ಮ ಕ್ಷೇತ್ರದ ಜನ, ಕಾರ್ಯಕರ್ತರಿಗೆ ಏನೆಂದು ಉತ್ತರಿಸಬೇಕು ಎಂದು ಮುಖಂಡರು ಕೇಳುತ್ತಿದ್ದಾರೆ. ಅವರನ್ನೇ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿ ಎಂದೂ ಪ್ರತಿಪಾದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಬಹಳಷ್ಟು ನಿಷ್ಠಾವಂತ ಕಾರ್ಯಕರ್ತರಿದ್ದರೂ ಮೂಲೆ ಗುಂಪಾಗಿದ್ದಾರೆ. ಅಧಿಕಾರವಿಲ್ಲದಿದ್ದಾಗ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ. ಅಧಿಕಾರ ಬಂದಾಗ ಬಿಡುತ್ತಾರೆ. ೪೦ ವರ್ಷದ ರಾಜಕೀಯದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಮೂಲೆ ಗುಂಪಾಗುತ್ತಿದ್ದೇನೆ ಎಂದು ನನಗೂ ಅನಿಸುತ್ತಿದೆ ಎಂದು ಬಿ.ಶಿವರಾಂ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನೇ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲೇಬೇಕು. ಯಾರು ಸಮರ್ಥ ಅಭ್ಯರ್ಥಿಯೆಂಬ ಪ್ರಶ್ನೆ ನಮ್ಮಲ್ಲಿದೆ. ಜನಾಭಿಪ್ರಾಯ ಸಂಗ್ರಹಿಸಿದ್ದೇವೆ. ಇಡೀ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರೇ ಸಮರ್ಥರೆಂಬ ಅಭಿಪ್ರಾಯ ಬಂದಿದೆ ಎಂದಿದ್ದಾರೆ.
ಬಿ.ಶಿವರಾಂ ಅವರೊಂದಿಗೆ, ಪ್ರಮುಖ ಆಕಾಂಕ್ಷಿಗಳಾದ ಶ್ರೇಯಸ್ ಪಟೇಲ್, ಎಂ.ಎ. ಗೋಪಾಲಸ್ವಾಮಿ, ಬಾಗೂರು ಮಂಜೇಗೌಡ ಅವರು, ಮುಂಚಿತವಾಗಿಯೇ ಅಭ್ಯರ್ಥಿಯನ್ನು ಘೋಷಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಅಭ್ಯರ್ಥಿಯ ಘೋಷಣೆಯಾಗದಿರುವುದರಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
