Kundapura: ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಜಾತ್ರೆ
Friday, January 26, 2024
ಕುಂದಾಪುರ: ಸಾಸ್ತಾನ ಕೋಡಿತಲೆಯ ಶ್ರೀನಾಲ್ಕುಪಾದ ಹ್ಯಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಜಾತ್ರೆಯ ಗೆಂಡ ಸೇವೆ ಹಾಗೂ ಕೋಲವು ಜ.24 ಮತ್ತು 25 ರಂದು ಭಕ್ತರು ಭಕ್ತಿಭಾವ ನಡುವೆ ಸಂಪನ್ನಗೊಂಡಿತು.
ಆ ಪ್ರಯುಕ್ತ ಪಂಚವಿಂಶತಿ ಕಲಶ ಸ್ಥಾಪನೆ, ಅಧಿವಾಸ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಜ.24 ರಂದು ರಾತ್ರಿ 8ಗಂಟೆಗೆ ‘ಕೆಂಡಸೇವೆ’ ಮತ್ತು ಜ.25 ರಂದು ಮಧ್ಯಾಹ್ನ ಹರಕೆಯ ರೂಪದಲ್ಲಿ ‘ತುಲಾಭಾರ ಸೇವೆ’ ಹಾಗೂ ದೇವಸ್ಥಾನದ ವತಿಯಿಂದ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ವಾರ್ಷಿಕ ಜಾತ್ರೋತ್ಸವದ ಹಿನ್ನೆಲೆಯಲ್ಲಿ ನಂಬಿದಂತಹ ಸಾವಿರಾರು ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಶ್ರೀ ದೇವರ ದರುಶನ ಪಡೆದರು.
ದೈವಸ್ಥಾನದ ಪ್ರದಾನ ಅರ್ಚಕರಾದ ಕೊರಗ ಪೂಜಾರಿ ದೈವ ದೇವರುಗಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ದೈವಸ್ಥಾನದ ಅಧ್ಯಕ್ಷ ಪದ್ಮನಾಭ ಪೂಜಾರಿ, ಕಾರ್ಯದರ್ಶಿ ಸುರೇಶ್ ಕುಂದರ್ ಐರೋಡಿ, ಮಹಾಬಲ ಕುಂದರ್, ನಿತಿನ್ ಪೂಜಾರಿ, ರಮೇಶ್ ಭಾಸ್ಕರ್ ಪೂಜಾರಿ, ಕೋಶಾಧಿಕಾರಿ ಅಣ್ಣಪ್ಪ ಕುಂದರ್, ಮತ್ತಿತರರು ಉಪಸ್ಥಿತರಿದ್ದರು.

