Mangalore: ಭಗವದ್ಗೀತೆಯನ್ನು ಕನ್ನಡದಿಂದ ತುಳುವಿಗೆ ಭಾಷಾಂತರಿಸಿದ ಮಂಗಳೂರಿನ ಯುವಕ
ಮಂಗಳೂರು: ಮಂಗಳೂರಿನ ಕೊಂಚಾಡಿಯ ನಿವಾಸಿ 26 ರ ಹರೆಯದ ಯುವಕ ಯಶವಂತ್ ಸಾಲಿಯಾನ್ ಅವರು ತನ್ನ 23ನೇ ವಯಸ್ಸಿನಲ್ಲಿ ಭಗವದ್ಗೀತೆಯ 18 ಅಧ್ಯಾಯ, 700 ಶ್ಲೋಕಗಳನ್ನು ಕನ್ನಡದಿಂದ ತುಳು ಲಿಪಿಗೆ ಮೊಟ್ಟಮೊದಲ ಬಾರಿಗೆ ಭಾಷಂತರ ಮಾಡಿದ್ದು, ತುಳುನಾಡಿನ ಯುವಕನೋರ್ವ ಹೊಸ ಸಾಧನೆಯ ಮೈಲುಗಲ್ಲನ್ನು ಇಟ್ಟಿದ್ದಾರೆ.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸುಮ್ಮನೆ ಮನೆಯಲ್ಲಿ ಇದ್ದ ಯುವಕ ಕಾಲವನ್ನು ಕಳೆಯಲು ಅಂತರ್‌ಜಾಲದ ಮೂಲಕ ತುಳು ಲಿಪಿಯನ್ನು ಕಲಿತು 2020 ರ ಮೇ 23 ರಂದು ಭಗವದ್ಗೀತೆಯನ್ನು ಕನ್ನಡದಿಂದ ತುಳು ಲಿಪಿಗೆ ಅನುವಾದ ಮಾಡಲು ಪ್ರಾರಂಭಿಸಿ, 2020 ರ ಜೂನ್ 23ನೇ ತಾರೀಖಿಗೆ ತನ್ನ ಕಾರ್ಯವನ್ನು ಮುಗಿಸಿದ್ದಾರೆ. ಕೇವಲ ಒಂದು ತಿಂಗಳಲ್ಲಿ 18 ಅಧ್ಯಾಯ, 700 ಶ್ಲೋಕವನ್ನು ಸಂಪೂರ್ಣವಾಗಿ ಭಾಷಾಂತರ ಮಾಡಿ 400 ಪುಟಗಳ ಪುಸ್ತಕವನ್ನು ತುಳುನಾಡಿನ ಜನತೆಗೆ ನೀಡಿದ್ದಾರೆ.
ವಿಶೇಷವೆಂದರೆ 2020ರ ಸಂದರ್ಭದಲ್ಲಿ ತುಳುನಾಡಿನ ಬಹುತೇಕ ಜನರಿಗೆ ತುಳು ಲಿಪಿಯ ಬಗ್ಗೆ ಅರಿವು ಇಲ್ಲದ ಸಂದರ್ಭದಲ್ಲಿ ಅಂತರ್‌ಜಾಲದ ಮೂಲಕ ಯಾರದೇ ಬೆಂಬಲವನ್ನು ಪಡೆಯದೆ, ಆಸಕ್ತಿಯಿಂದ ತುಳು ಲಿಪಿಯನ್ನು ಕಲಿತು ಭಗವದ್ಗೀತೆಯನ್ನು ಭಾಷಾಂತರ ಮಾಡಿದ್ದಾರೆ.
ಸಧ್ಯ ಮಂಗಳೂರಿನ ತ್ರಿಶಾ ಕಾಲೇಜಿನ ಕಚೇರಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೆ ತುಳು ಸಾಹಿತ್ಯ ಅಕಾಡೆಮಿಗೆ ಒಂದು ಪ್ರತಿಯನ್ನು ನೀಡಲಾಗಿದ್ದು, ತುಳು ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಕರಾವಳಿಯ ಎಲ್ಲಾ ತುಳುವರಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ.
"ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸುಮ್ಮನೆ ಮನೆಯಲ್ಲಿ ಕೂತು ಏನು ಮಾಡುವುದು ಎಂದು ಯೋಜಿಸುವಾಗ ಆಗಷ್ಟೇ ತುಳು ಲಿಪಿಯ ಅನಾವಣಗೊಳ್ಳುತ್ತಿದ್ದು, ಅದನ್ನು ಕಲಿಯುವ ಮನಸ್ಸು ಮಾಡಿ ಅಂತರ್‌ಜಾಲದಲ್ಲಿ ಕಲಿತು, ತುಳು ಲಿಪಿಯಲ್ಲಿ ಏನಾದರೂ ಮಾಡಬೇಕೆಂದು ಹೊರಟಾಗ ಭಗವದ್ಗೀತೆಯನ್ನು ಕನ್ನಡದಿಂದ ತುಳುವಿಗೆ ಭಾಷಾಂತರ ಮಾಡಬಹುದೆಂದು ಯೋಜಿಸಿ ಈ ಕಾರ್ಯವನ್ನು ಮಾಡಿದೆ." -ಯಶವಂತ್ ಸಾಲಿಯಾನ್, ಭಗವದ್ಗೀತೆಯನ್ನು ಕನ್ನಡದಿಂದ ತುಳುವಿಗೆ ಭಾಷಾಂತರ ಮಾಡಿದ ಯುವಕ.
