Mangalore: ಬಿಜೆಪಿ ಗೂಂಡಾಗಿರಿ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್‌ಜೋಡೊ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಬಸ್ಸನ್ನು ಅಡ್ಡಗಟ್ಟಿ ದಾಳಿ ನಡೆಸಲು ಯತ್ನಿಸಿದ್ದನ್ನು ಖಂಡಿಸಿ ಜ.23 ರಂದು ಮಂಗಳೂರಿನ ಮಿನಿವಿಧಾನಸೌಧದ ಎದುರು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಅಸ್ಸಾಂನ ಜನತೆ ಕಾಂಗ್ರೆಸ್ ಪಕ್ಷದ ಎಲ್ಲಾ ಲಾಭವನ್ನು ಪಡೆದು, ಎಲ್ಲಾ ಸೌಲಭ್ಯವನ್ನು ತಿಂದು ಈಗ ಬಿಜೆಪಿ ಪಕ್ಷದ ಜೊತೆ ಸೇರಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದು ಯಾವ ನ್ಯಾಯ. ಅಸ್ಸಾಂನ ಲಕ್ಷ್ಮೀಪುರದಲ್ಲಿ ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ತಡೆದು, ಬಿತ್ತಿ ಪತ್ರಗಳನ್ನು ಹರಿದುಹಾಕಿ, ಹಲ್ಲೆ ನಡೆಸಲು ಬಿಜೆಪಿಯ ಗೂಂಡಾಗಳು ಮುಂದಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಚುತಿ ತರುವ ಕೃತ್ಯವಾಗಿದ್ದು, ಕಾಂಗ್ರೆಸ್ ಮುಖಂಡ ಜಯರಾಂ ಗಣೇಶ ಅವರ ವಾಹನವನ್ನೂ ತಡೆದು ಅವರ ವಾಹನದಲ್ಲಿದ್ದ ಬಾವುಟಗಳನ್ನು ಹರಿದು, ಭಾವನೆಗಳಿಗೆ ಘಾಸಿ ಮಾಡಿದ್ದಾರೆ ಇದನ್ನು ದ.ಕ. ಜಿಲ್ಲಾ ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.
ಈ ಗೂಂಡಾಗಿರಿಯನ್ನು ದೇಶದಲ್ಲಿ ಹಾಗೂ ಅಸ್ಸಾಂನಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರ ನಡೆಸುತ್ತಿದ್ದು, ಈ ರೀತಿಯ ಗೂಂಡಾ ಪ್ರಕ್ರಿಯೆಗೆ ಧಿಕ್ಕಾರ ಇದೆ. ಈ ಕೃತ್ಯವನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ. ಈ ಕೃತ್ಯಕ್ಕೆ ಅಸ್ಸಾಂನ ಮುಖ್ಯಮಂತ್ರಿಗೆ ಅಲ್ಲಿಯ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದ ಅವರು ಅಸ್ಸಾಂ ವಿಶ್ವವಿದ್ಯಾನಿಲಯದ ಮಕ್ಕಳು ರಾಹುಲ್ ಗಾಂಧಿಯವರನ್ನು ವಿಶ್ವವಿದ್ಯಾನಿಲಯಕ್ಕೆ ಕರೆಸಿ ಮಾತನಾಡಬೇಕು ಎಂದು ಕೇಳಿಕೊಂಡರೆ ವಿಶ್ವವಿದ್ಯಾನಿಲಯದಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆಗ ರಾಹುಲ್ ಗಾಂಧಿ ಅವರು ರಸ್ತೆಯಲ್ಲಿ ನಿಂತು ಮಾತನಾಡಿದ್ದು, ಅಲ್ಲಿಗೆ ಸಾವಿರಾರು ವಿದ್ಯಾರ್ಥಿಗಳು ಸೇರಿದ್ದಾರೆ. ಇದೊಂದು ಘಟನೆ ಇತಿಹಾಸ ಸೃಷ್ಠಿಸಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಇಬ್ರಾಹಿಂ ಕೊಡಿಜಾಲ್, ಮಿಥುನ್ ರೈ, ರಕ್ಷಿತ್ ಶಿವರಾಮ್, ಶಾಲೆಟ್ ಪಿಂಟೋ, ಸಾಹುಲ್ ಹಮೀದ್, ವಿಶ್ವಾಸ್ ದಾಸ್, ವಸಂತ್ ಬೆರ್ನಾಡ್, ಲುಕ್ಮನ್ ಬಂಟ್ವಾಳ್, ಬೇಬಿ ಕುಂದರ್, ಆರ್.ಕೆ. ಪೃಥ್ವಿರಾಜ್, ಮೋಹನ್ ಕೋಟಿಯನ್, ಪ್ರಕಾಶ್ ಸಾಲಿಯಾನ್, ಸುರೇಂದ್ರ ಕಂಬ್ಳಿ, ಜೆ. ಅಬ್ದುಲ್ ಸಲೀಂ, ಪುರೊಸೋತಮ ಚಿತ್ರಪುರ, ಪ್ರವೀಣ್ ಆಳ್ವಾ, ಅಪ್ಪಿ, ಗಿರೀಶ್ ಆಳ್ವಾ, ಮಂಜುಳಾ ನಾಯಕ್, ಜಸಿಂತ ಅಲ್ಫ್ರೆಡ್ ಮತ್ತಿತರರು ಉಪಸ್ಥಿತರಿದ್ದರು.
