Bantwal: ಸಾಧು, ಸಂತರ ಹೋರಾಟದ ಫಲವಾಗಿ ಹಿಂದೂ ಧರ್ಮ ಗಟ್ಟಿಯಾಗಿದೆ: ಶ್ರೀಕಾಂತ್ ಶೆಟ್ಟಿ
ಬಂಟ್ವಾಳ: ಜಗತ್ತಿಗೆ ಒಳಿತನ್ನು ಬಯಸುವ ಹಿಂದೂ ಧರ್ಮ ಸಾಧು, ಸಂತರ ಹೋರಾಟದ ಫಲವಾಗಿ ಗಟ್ಟಿಯಾಗಿ ನೆಲೆ ನಿಂತಿದೆ. ಹಿಂದೂ ಸಮಾಜವನ್ನು ದಮನಿಸಿದಷ್ಟು ಎದ್ದು ನಿಲ್ಲಲಿದೆ. ನಮ್ಮಲ್ಲಿನ ಜಾತಿ, ಪಂಗಡಗಳನ್ನು ಮೆಟ್ಟಿನಿಂತು ನಾವೆಲ್ಲರೂ ಹಿಂದೂ ಎನ್ನುವ ಬಾಂಧವ್ಯದಿಂದ ದೇಶ ಕಟ್ಟುವ ಕಾರ್ಯವಾಗಬೇಕಾಗಿದೆ ಎಂದು ಪತ್ರಕರ್ತ, ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಪುದುಗ್ರಾಮದ ಫರಂಗಿಪೇಟೆಯ ವಿಜಯನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆಯುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ 2ನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸಗೈದು ಹನುಮನ ದೇವಸ್ಥಾನದ ಮೂಲಕ ಸಮಾಜಕ್ಕೆ ಸಂಸ್ಕಾರ ಹಾಗೂ ಧಾರ್ಮಿಕ ಶಿಕ್ಷಣ ದೊರೆಯಬೇಕು, ಈ ಕ್ಷೇತ್ರವು ಹಿಂದೂ ಸಮಾಜದ ಶಕ್ತಿ ಕೇಂದ್ರವಾಗಿ ಮೂಡಿಬರಲಿ ಎಂದ ಆಶಯ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದು, ಧಾರ್ಮಿಕ ಶ್ರದ್ದಾ ಕೇಂದ್ರವು ನಮಗೆ ಜೀವನೋತ್ಸಾಹವನ್ನು ನೀಡುತ್ತದೆ. ರಾಮನ ತ್ಯಾಗ,ಹನುಮನ ಸೇವೆ ನಮಗೆ ಆದರ್ಶವಾಗಲಿ ರಾಮನ ನಡೆ,ಕೃಷ್ಣನ ನುಡಿ ನಮಗೆ ಜೀವಾಳ. ಹನುಮನ ಅನುಗ್ರಹದಿಂದ ದೇವಸ್ಥಾನವು ಅದ್ಬುತವಾಗಿ ನಿರ್ಮಾಣವಾಗಿದೆ ಎಂದರು.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್ ನೀರುಮಾರ್ಗ, ಭಂಡಾರಿ ಬಿಲ್ಡರ್ಸ್ ನ ಮ್ಯಾನ್ಯಜಿಂಗ್ ಡೈರೆಕ್ಟರ್ ಲಕ್ಷ್ಮೀಶ ಭಂಡಾರಿ, ದೇವಸ್ಥಾನದ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು,ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಆಳ್ವ ಕಂಪ, ಪ್ರಧಾನ ಸಂಚಾಲಕ ದೇವಸ್ಯ ಪ್ರಕಾಶ್ ಚಂದ್ರ ರೈ, ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು ಉಪಸ್ಥಿತರಿದ್ದರು.
ವೇದಿಕೆ ಸಮಿತಿಯ ಸಂಚಾಲಕ ಜಗದೀಶ ಕಡೆಗೋಳಿ ಸ್ವಾಗತಿಸಿ, ಪ್ರಚಾರ ಸಮಿತಿಯ ಸಹಸಂಚಾಲಕ ಸಂತೋಷ್ ಕುಲಾಲ್ ನೆತ್ತರಕೆರೆ ವಂದಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಶ್ರೀ ರಾಮಕೃಷ್ಣ ಬಾಲಗೋಕುಲ ಮಲ್ಲೂರು ಇವರಿಂದ ತುಳುನಾಡ ವೈಭವ ಹಾಗೂ ಸುಪ್ರಸಿದ್ದ ಗಾಯಕ ಅಜಯ್ ವಾರಿಯರ್ ತಂಡದಿಂದ ಭಕ್ತಿ ಭಾವ ಸಂಗಮ ಕಾರ್ಯಕ್ರಮ ನಡೆಯಿತು.