Chikkamagaluru: ಜನವರಿ 30: ಹುತಾತ್ಮರ ದಿನ ಆಚರಣೆ
ಚಿಕ್ಕಮಗಳೂರು: ಜಿಲ್ಲಾಡಳಿತದ ವತಿಯಿಂದ ಜನವರಿ 30 ರಂದು ಹುತಾತ್ಮರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್ ತಿಳಿಸಿದರು.
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಹುತಾತ್ಮರ ದಿನ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ, ಉದ್ಯಾನವನದಲ್ಲಿರುವ ರಾಷ್ಟ್ರಪಿತ ನೆನಪಿನಂಗಳದ ಗಾಂಧಿ ಪ್ರತಿಮೆ ಮಂಟಪ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು. ಅಂದು ಬೆಳಿಗ್ಗೆ 10 ಗಂಟೆಗೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಶಾಲಾ ಮಕ್ಕಳು ಆಗಮಿಸುವಂತೆ ಬೆಳಿಗ್ಗೆ 10.30 ಗಂಟೆಯಿಂದ ಗಾಂಧಿ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ ನಂತರ ಮಹಾತ್ಮಗಾಂಧೀಜಿಯವರ ಪ್ರಿಯ ಭಜನೆಗಳನ್ನು ಶಾಲಾ ಮಕ್ಕಳಿಂದ ಹಾಡಿಸಲು ಕ್ರಮ ವಹಿಸುವಂತೆ ತಿಳಿಸಿದ ಅವರು ಬೆಳಿಗ್ಗೆ 10.59 ರಿಂದ 11.0 ಗಂಟೆಯವರೆಗೆ ಮೌನಾಚರಣೆಯನ್ನು ಆಚರಿಸಲು ಅನುವಾಗುವಂತೆ ಸೈರನ್ ಮೊಳಗಿಸಲು ತಿಳಿಸಿದರು.
ಹುತಾತ್ಮರ ದಿನವನ್ನು ಅಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಆಚರಿಸಲು ಶಿಕ್ಷಣ ಇಲಾಖೆಯಿಂದ ಶಾಲಾ-ಕಾಲೇಜುಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
