Moodubidire: ತೆಂಕಮಿಜಾರಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ
ಮೂಡುಬಿದಿರೆ: ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಂಗವಾಗಿ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ಅಂಬೇಡ್ಕರ್ ಪ್ರತಿಮೆಯ ಸ್ತಬ್ಧ ಚಿತ್ರವನ್ನು ಬಡಗಮಿಜಾರು ಗ್ರಾಮದ ಕೊಂಟಡ್ಕ ಪ್ರದೇಶದಲ್ಲಿ ಸ್ವಾಗತಿಸಿ, ಸುಮಾರು 2 ಕಿ.ಮೀ. ವರೆಗೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರು ಸೇರಿಕೊಂಡು ಪಂಚಾಯತ್ ಕಚೇರಿವರೆಗೆ ಬೈಕ್ ಜಾಥಾ ನಡೆಸಿದರು.
ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಅಧ್ಯಕ್ಷೆ ಶಾಲಿನಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ. ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪೂರ್ಣ ಕುಂಭ ಸ್ವಾಗತ ನಡೆಸಿ, ಶಾಲಾ ಮಕ್ಕಳ ಬ್ಯಾಂಡ್ ಸೆಟ್ನೊಂದಿಗೆ ಜಾಥಾವನ್ನು ಶಾಲಾ ಆವರಣದೊಳಗೆ ಬರಮಾಡಿಕೊಂಡರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್ ಅಂಬೇಡ್ಕರ್ ಪುತ್ತಳಿಗೆ ಹಾರಾರ್ಪಣೆ ಮಾಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮಾತನಾಡಿ, ಜನರಲ್ಲಿ ಸಂವಿಧಾನ ಬಗ್ಗೆ ಅರಿವು ಮೂಡಿಸುವುದು ಬಹಳ ಉತ್ತಮ ಕಾರ್ಯಕ್ರಮ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಸೈನಿಕ ಎಂ.ಜಿ. ಮೊಹಮ್ಮದ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಡಾ. ಪ್ರತಿಮಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಯಮುನಾ ಕೆ. ಪುಷ್ಪಾಂಜಲಿ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳು ಸಂವಿಧಾನ ಪೀಟಿಕೆ ಕಂಠಪಾಠವಾಗಿ ಹೇಳಿದರು. ನಂತರ ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಜಾಗೃತಿ ಕಲಾ ತಂಡದವರು ಸಂವಿಧಾನ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿಕೊಟ್ಟರು.
ಸಂವಿಧಾನ ಪೀಠಿಕೆ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಶಾಲಿನಿ ಬಹುಮಾನ ವಿತರಿಸಿದರು. ಪಿಡಿಒ ರೋಹಿಣಿ ಬಿ. ಸ್ವಾಗತಿಸಿ, ವಂದಿಸಿದರು.
