Kadaba: ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ಧಾಳಿ
ಕಡಬದಲ್ಲಿ ವಿಕೃತಿ ಮೆರೆದ ಆರೋಪಿ ಯುವಕನ ಬಂಧನ
ಕಡಬ: ಮೂವರು ಪಿಯುಸಿ ವಿದ್ಯಾರ್ಥಿನಿಯರ ಮೇಲೆ ವಿಕೃತಿ ಮೆರೆದು ಆಸಿಡ್ ಧಾಳಿ ನಡೆಸಿದ ಘಟನೆ ಕಡಬ ತಾಲೂಕಿನಲ್ಲಿ ಸೋಮವಾರ ನಡೆದಿದೆ. ಪದವಿಪೂರ್ವ ಕಾಲೇಜಿನಲ್ಲಿ ಈ ವಿದ್ಯಾರ್ಥಿನಿಯರು ಪರೀಕ್ಷಾ ತಯಾರಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಮುಸುಕುಧಾರಿಯಾಗಿ ಬಂದ ಯುವಕ ಈ ಕೃತ್ಯ ಎಸಗಿದ್ದಾನೆ. ಘಟನೆ ನಡೆದ ಕೆಲವೇ ಸಮಯದಲ್ಲಿ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.
ಆರೋಪಿ ಯುವಕ ಎಂಬಿಎ ವಿದ್ಯಾರ್ಥಿಯಾಗಿದ್ದು, ಕೇರಳ ಮೂಲಕ ಮಲಪ್ಪರಂ ಜಿಲ್ಲೆಯ ಆಬೀನ್ (23) ಎಂದು ಗುರುತಿಸಲಾಗಿದೆ. ಆಸಿಡ್ ದಾಳಿಗೆ ಒಳಗಾದ ಪಿಯುಸಿ ವಿದ್ಯಾರ್ಥಿನಿಯರ ಪೈಕಿ ಆಲೀನಾ ಸಿ.ಬಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಪಕ್ಕದಲ್ಲಿಯೇ ಇದ್ದ ಅರ್ಚನಾ ಹಾಗೂ ಅಮೃತ ಎಂಬವರಿಗೂ ಆಸಿಡ್ ಬಿದ್ದು ಸಣ್ಣ ಪ್ರಮಾಣದ ಗಾಯಗಳಾಗಿದೆ. ಈ ಮೂವರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರೇಮಕ್ಕೆ ಸಿಗದ ಗ್ರೀನ್ ಸಿಗ್ನಲ್:
ಆರೋಪಿ ಯುವಕ ಅಬೀನ್ ಮನೆಯ ಪಕ್ಕದಲ್ಲಿಯೇ ಕೇರಳ ಮೂಲದ ವಿದ್ಯಾರ್ಥಿನಿ ಆಬೀನಾ ಸಿ.ಬಿ ಅವರ ತಾಯಿ ಮನೆಯೂ ಇದ್ದು, ಇಲ್ಲಿಗೆ ಬಂದ ಆಕೆಯ ಪರಿಚಯ ಮಾಡಿಕೊಂಡಿದ್ದು ಆರೋಪಿ ಆಕೆಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಮನ್ನಣೆ ನೀಡದ ಕಾರಣ ಆಕೆಯನ್ನು ಗುರಿಯಾಗಿಸಿ ಆಸಿಡ್ ಧಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿದ್ದ ವಿದ್ಯಾರ್ಥಿನಿಯರೂ ಈ ಆಸಿಡ್ ದಾಳಿಗೆ ಸಿಲುಕಿದ್ದಾರೆ. ಆರೋಪಿ ಯುವಕ ಹಾಗೂ ಕೇರಳ ಮೂಲದ ಈ ವಿದ್ಯಾರ್ಥಿನಿ ಇಬ್ಬರೂ ಒಂದೇ ಕೋಮಿನವರಾಗಿದ್ದಾರೆ. ಕಡಬ ಪದವಿಪೂರ್ವ ಕಾಲೇಜಿನ ಆವರಣದಲ್ಲಿಯೇ ನಡೆದ ಈ ಆತಂಕಕಾರಿ ಘಟನೆ ಕಡಬ ಹಾಗೂ ಪುತ್ತೂರು ತಾಲೂಕಿನ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇ ಗೌಡ ಹಾಗೂ ಪುತ್ತೂರು ಸಹಾಯಕ ಆಯುಕ್ತರಾದ ಜೊಬಿನ್ ಮೊಹಾಪಾತ್ರ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಎಸ್‌ಪಿ ಹೇಳಿಕೆ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿ ಆಸಿಡ್ ದಾಳಿಗೆ ಒಳಗಾದ ಮೂವರು ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೇರಳ ಮೂಲದ ವಿದ್ಯಾರ್ಥಿನಿಯನ್ನು ಗುರಿಯಾಗಿಸಿ ಈ ಧಾಳಿ ನಡೆಸಲಾಗಿದೆ. ಆಕೆಗೆ ಹೆಚ್ಚಿನ ಪ್ರಮಾಣದಲ್ಲಿ ಗಾಯಗಳಾಗಿದೆ. ಉಳಿದಂತೆ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ. ಮೇಲ್ನೋಟಕ್ಕೆ ಪ್ರೇಮವೈಫಲ್ಯದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆರೋಪಿ ಕಾಲೇಜು ಸಮವಸ್ತ್ರ ಧರಿಸಿರುವುದು ಕಂಡುಬಂದಿದ್ದು, ಈತನಿಗೆ ಈ ಸಮವಸ್ತ್ರ ನೀಡಿದವರು ಯಾರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.