Mangalore: ರಾಷ್ಟ್ರೀಯ ವಿಜ್ಞಾನ ದಿನ-2024 ಆಚರಣೆ
Tuesday, March 19, 2024
ಮಂಗಳೂರು: ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾ.13 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾಗಿ ನಿವೃತ್ತರಾಗಿ ಪ್ರಸ್ತುತ ಯನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಹಾಗೂ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಚಂದ್ರಶೇಖರ ಕೆ.ಆರ್. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಪ್ರೊ. ಚಂದ್ರಶೇಖರ್ ಕೆ.ಆರ್. ಅವರು ಸ್ಥಳೀಯ ತಂತ್ರಜ್ಞಾನದ ಮಹತ್ವ ಹಾಗೂ ದೇಶದ ಅಭಿವೃದ್ಧಿಯಲ್ಲಿ ಅದರ ಪಾತ್ರದ ಕುರಿತು ವಿವರಿಸಿದರು. ಕಾರ್ಯಕ್ರಮದ ಅಂಗವಾಗಿ ವಿಕಸಿತ ಭಾರತಕ್ಕಾಗಿ ದೇಶೀಯ ಮತ್ತು ಸ್ಥಳೀಯ ತಂತ್ರಜ್ಞಾನಗಳು ಎನ್ನುವ ವಿಷಯದ ಕುರಿತು ಮಂಗಳೂರು ವಿ.ವಿ ಮಟ್ಟದ ಅಂತರ ಕಾಲೇಜು ವಿಜ್ಞಾನ ಉಪನ್ಯಾಸ ಸ್ಪರ್ಧೆಗಳು ನಡೆದವು.
ಮಂಗಳೂರಿನ ಕೆನರಾ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಸಂಧ್ಯಾ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಅಧಿಕಾರಿ ಡಾ. ರಾಮಕೃಷ್ಣ ಇವರು ತೀರ್ಪುಗಾರರಾಗಿ ಆಗಮಿಸಿದ್ದರು. ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀರಕ್ಷ ಪ್ರಥಮ, ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ವಂದನ ಆರ್. ಹೆಗಡೆ. ದ್ವಿತೀಯ ಹಾಗೂ ಬೆಟಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಧುಶ್ರೀ ಕೆ.ಎಸ್. ತೃತೀಯ ಬಹುಮಾನ ಪಡೆದರು. ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.