Mangalore: ಕೃಷಿ ಭೂಮಿಯ ಸಂರಕ್ಷಣೆಗಾಗಿ ಸಂಘಟಿತ ಹೋರಾಟ ಅಗತ್ಯ
ಮಂಗಳೂರು: ಉಳುವವನೆ ಹೊಲದೊಡೆಯ ಘೋಷಣೆಯಡಿ ಗೇಣಿದಾರರು ನಡೆಸಿದ ಸಂಘರ್ಷಮಯ ಹೋರಾಟದಿಂದಾಗಿ ನೂರಾರು ಎಕರೆ ಭೂಮಿ ಹೊಂದಿದ್ದ ಭೂ ಒಡೆಯರು ರೈತರಿಗೆ ಭೂಮಿಯನ್ನು ಬಿಟ್ಟುಕೊಡಬೇಕಾಯ್ತು. ಅಂದು ಇಂತಹ ಚಾರಿತ್ರಿಕ ಹೋರಾಟದ ಕೇಂದ್ರವಾಗಿದ್ದ ಉಳ್ಳಾಲ ತಾಲೂಕಿನಲ್ಲಿ ಬಂಡವಾಳಶಾಹಿಗಳು ಸಣ್ಣ ರೈತರಿಂದ ವಿವಿಧ ರೀತಿಯ ಆಮಿಷ, ಬೆದರಿಕೆ, ರಾಜಕೀಯ ಬೆಂಬಲದ ಮೂಲಕ ಜಮೀನನ್ನು ಬಲವಂತವಾಗಿ ವಶ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿಪಿಐಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಇಂದು ಕುತ್ತಾರ್ ನಲ್ಲಿ ಜರುಗಿದ ಉಳ್ಳಾಲ ತಾಲೂಕಿನ ಬೆಳ್ಮ, ಮುನ್ನೂರು, ಅಂಬ್ಲಮೊಗರು ಗ್ರಾಮಗಳಲ್ಲಿ ಖಾಸಗಿ ಬಂಡವಾಳಶಾಹಿಗಳು ನೂರಾರು ಎಕರೆ ಕೃಷಿ ಭೂಮಿ ಖರೀದಿಸುತ್ತಿರುವುದರಿಂದ ಗಂಭೀರ ಸಮಸ್ಯೆಗಳಿಗೆ ಈಡಾಗಿರುವ ಗ್ರಾಮಸ್ಥರ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಒಬ್ಬೊಬ್ಬ ಶಿಕ್ಷಣ, ಆರೋಗ್ಯದ ವ್ಯಾಪಾರಿಗಳು, ಭೂದಂಧೆ ಕೋರರ ಕೈಯಲ್ಲಿ ನೂರಾರು ಎಕರೆ ಭೂಮಿ ಜಮೆಯಾಗತೊಡಗಿದೆ. ಉಳ್ಳಾಲ ಮತ್ತೊಮ್ಮೆ ಜಮೀನ್ದಾರಿ ಯುಗಕ್ಕೆ ತೆರೆದುಕೊಳ್ಳುತ್ತಿದೆ. ಗ್ರಾಮಸ್ಥರು ಮೈಕೊಡವಿ ಹೋರಾಟಕ್ಕೆ ಇಳಿಯದಿದ್ದಲ್ಲಿ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುವ, ವಸತಿ, ಆಹಾರಕ್ಕೂ ಪರದಾಡುವ ಅಭ್ರದ್ರತೆಯ ಬದುಕಿಗೆ ಬೀಳಬೇಕಾಗುತ್ತದೆ.ಅದಕ್ಕಾಗಿ ಕ್ರಷಿ ಭೂಮಿಯ ಸಂರಕ್ಷಣೆಗಾಗಿ ಇಡೀ ಊರಿನ ಗ್ರಾಮಸ್ಥರು ಒಂದಾಗಿ ಸಂಘಟಿತ ಹೋರಾಟ ನಡೆಸಬೇಕೆಂದು ಹೇಳಿದರು.
ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಈಗಾಗಲೆ ಮಂಗಳೂರಿನ ಹಲವು ಭಾಗಗಳಲ್ಲಿ ಖಾಸಗಿ ಧನಿಕರು, ಉದ್ಯಮಿಗಳು ಏಜಂಟರ ಮೂಲಕ ನೂರಾರು ಎಕರೆ ಜಮೀನು ಖರೀದಿಸಿದ್ದಾರೆ. ದಾಖಲೆಗಳನ್ನು ಪೋರ್ಜರಿಗೊಳಿಸುವುದು, ರಸ್ತೆ ಸಂಪರ್ಕ, ನೀರಿನ ಮೂಲಗಳನ್ನು ಮುಚ್ಚಿ ಭೂಮಿಯನ್ನು ತಾವು ನಿಗದಿ ಮಾಡಿದ ಭೂಮಿ ನೀಡುವಂತೆ ಬಲವಂತ ಪಡಿಸುವುದು ನಡೆಯುತ್ತಿದೆ. ರಾಜಕೀಯ, ಆಡಳಿತದ ಬಲವೂ ಭೂ ಮಾಫಿಯಾಗಳ ಪರವಾಗಿದ್ದು, ಬಲವಾದ ಸಂಘಟಿತ ಹೋರಾಟ ಕಟ್ಟದಿದ್ದಲ್ಲಿ ಅಪಾಯ ಕಾದಿದೆ ಎಂದರು.
ಹಿರಿಯ ರೈತ ಮುಖಂಡ, ಸಹಕಾರಿ ಧುರೀಣ ಕೃಷ್ಣಪ್ಪ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ಟಿ. ದೆಪ್ಪಲಿಮಾರ್, ಕಾರ್ಮಿಕ ನಾಯಕರಾದ ಜಯಂತ ನಾಯಕ್,ಜನಾರ್ಧನ ಕುತ್ತಾರ್, ಇಬ್ರಾಹಿಂ ಮದಕ, ರೈತ ನಾಯಕರಾದ ಶೇಖರ್ ಕುಂದರ್, ಜಯಂತ ಅಂಬ್ಲಮೊಗರು, ವಿಶ್ವನಾಥ ತೇವುಲ, ಸುಂದರ ಅಂಬ್ಲಮೊಗರು, ಯುವಜನ ನಾಯಕರಾದ ಡಾ. ಜೀವನ್ ರಾಜ್ ಕುತ್ತಾರ್, ಹಿತೈಷ್ ಮತ್ತಿತರರು ಉಪಸ್ಥಿತರಿದ್ದರು.