Mangalore: ಮತದಾನ ಪ್ರತಿಯೊಬ್ಬರ ಹಕ್ಕು
ಮಂಗಳೂರು: ಮತದಾನ ಪ್ರತಿಯೊಬ್ಬರ ಹಕ್ಕು. ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರ ತಪ್ಪದೆ ಮತಚಲಾಯಿಸಬೇಕು ಎಂದು ಮಂಗಳೂರು ಸಿಸಿಬಿ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಕರೆ ನೀಡಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತ ಸರಕಾರ, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತೀಯ ನಿರ್ದೇಶನಾಲಯ ಬೆಂಗಳೂರು ಇದರ ಸಹಕಾರದೊಂದಿಗೆ ‘ನನ್ನ ಮೊದಲ ಮತ ದೇಶಕ್ಕಾಗಿ, ದೇಶದ ಉನ್ನತಿಗಾಗಿ’ ಘೋಷವಾಕ್ಯದಡಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಯುವ ಮತದಾರರು ಕೂಡ ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಬೇಕು. ಪ್ರತಿಯೊಂದು ಮತ ಕೂಡ ಅಮೂಲ್ಯವಾಗಿದ್ದು, ಯೋಚಿಸಿ ಮತದಾನ ಮಾಡುವ ಮೂಲಕ ಅರ್ಹ ವ್ಯಕ್ತಿಯನ್ನು ಚುನಾಯಿಸಬೇಕು ಎಂದು ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಅಧಿಕಾರಿ ಡಾ. ಕೆ.ಎ. ನಾಗರತ್ನ ಮಾತನಾಡಿ, ಚುನಾವಣೆಯನ್ನು ನಿರ್ಲಕ್ಷಿಸದೆ ಮತದಾರರು ಮತದಾನ ಮಾಡಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕು. ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ ತಮ್ಮ ಹಕ್ಕನ್ನು ಚಲಾಯಿಸಬೇಕು. ಜಿಲ್ಲೆಯಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸುವಲ್ಲಿ ಶ್ರಮಿಸಬೇಕು ಎಂದರು.
ಮೊದಲ ಬಾರಿ ಮತ ಚಲಾಯಿಸಲು ಸಿದ್ಧವಾಗಿರುವ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
