Ullal: ಪ್ರವಾಸೋದ್ಯಮ ಪ್ರದೇಶವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ
ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ ಪ್ರತಿ ಗ್ರಾಮವನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸುತ್ತಾ ಬರಲಾಗಿದೆ. ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಪಾವೂರು, ಬೋಳಿಯಾರು, ಅಂಬ್ಲಮೊಗರು, ಹರೇಕಳ ಗ್ರಾಮಗಳು ನದಿ ಬದಿಯಲ್ಲಿರುವುದರಿಂದ ಇಲ್ಲಿ ಅಭಿವೃದ್ಧಿ ಅಸಾಧ್ಯ ಎಂಬ ತಪ್ಪು ಕಲ್ಪನೆ ಹೋಗಲಾಡಿಸಿ ಇದೇ ನದಿ ಬದಿಗೆ ವಿಶೇಷ ಅನುದಾನ ನೀಡುವುದರ ಮೂಲಕ ಪ್ರವಾಸೋದ್ಯಮ ಪ್ರದೇಶವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸ್ಪೀಕರ್ ಯುಟಿ ಖಾದರ್ ಸಂತಸ ವ್ಯಕ್ತಪಡಿಸಿದರು.
ಅವರು ಹರೇಕಳ ಕಡವಿನ ಬಳಿ ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೇತ್ರಾವತಿ ಎಡದಂಡೆ ಖಾರ್ ಲ್ಯಾಂಡ್ ನಿರ್ಮಾಣಕ್ಕೆ ಬುಧವಾರ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಈ ಭಾಗ ಪ್ರವಾಸೋದ್ಯಮ ಸ್ಥಳವಾಗಿ ದೇಶದಾದ್ಯಂತ ಜನರು ಈ ಭಾಗಕ್ಕೆ ಬರಬೇಕು. ಪ್ರಥಮಹಂತವಾಗಿ ಡ್ಯಾಂ ಕಮ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಅಂಬ್ಲಮೊಗರುವಿನಿಂದ ಹರೇಕಳ ತನಕ ಪಾರ್ಕ್ ಮತ್ತು ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿ ಜನ ಸಾಮಾನ್ಯರಿಗೆ ಪ್ರಯೋಜನವಾಗುವಂತೆ ಮಾಡಲಾಗಿದೆ. ಹರೇಕಳ ಬೈತಾರ್‌ನಿಂದ ಗಡುವು ತನಕ 6.5ಕೋಟಿ ರೂ.ಗಳ ಯೋಜನೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಅಂಬ್ಲಮೊಗರು ಭಾಗದಲ್ಲಿ 2ಕೋಟಿ ರೂ. ಅನುದಾನ ಇಡಲಾಗಿದೆ. ಪಾವೂರು ತನಕ ಒಟ್ಟಾರೆ 20ಕೋಟಿ ರೂ. ಯೋಜನೆ ಆಗಿದ್ದು ರಸ್ತೆ ಮತ್ತು ಸೌಂದರ್ಯೀಕರಣ ಆಗಲಿದೆ. ಅದಕ್ಕಾಗಿ 10ಕೋಟಿ ರೂ. ಮೀಸಲಿಡಲಿದ್ದೇನೆ. ಇದು ಗ್ರಾಮದ ಸಂಪತ್ತು. ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮೊದಲ ಹಂತದ ಯೋಜನೆಯಾಗಿ ಹಲವು ಕೋಟಿ ರೂ. ವೆಚ್ಚದ ಡ್ಯಾಂ ನಿರ್ಮಾಣದ ಮೂಲಕ ಮನೆ ಮನೆಗೂ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ಎರಡನೇ ಹಂತ ಪೈಪ್ ಲೈನ್ ಓವರ್ ಹೆಡ್ ಟ್ಯಾಂಕ್ ನಳ್ಳಿ ಸಂಪರ್ಕಕ್ಕೆ 240 ಕೋಟಿ ರೂ. ಮೀಸಲಿಡಲಾಗಿದೆ. ಈಗ ನಗರ ಉಳ್ಳಾಲ ಪ್ರದೇಶಕ್ಕೆ ಹೆಚ್ಚುವರಿಯಾಗಿ 160 ಕೋಟಿ ರೂ. ಅನುದಾನ ಕೇಳಲಾಗಿದೆ. ಒಟ್ಟಿನಲ್ಲಿ ಇಪ್ಪತ್ತನ್ನಾಲ್ಕು ಗಂಟೆ ಕುಡಿಯುವ ನೀರು ಸೌಲಭ್ಯ ಸಿಗಲಿದೆ. ಮುಂದಿನ ಮೂವತ್ತು ವರ್ಷಗಳ ಕಾಲ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಗಳು, ಕಾರ್ಖಾನೆಗಳು, ಸಂಸ್ಥೆಗಳು ಬಹಳಷ್ಟು ಸಂಖ್ಯೆಯಲ್ಲಿ ನಿರ್ಮಾಣಗೊಂಡರೂ ನೀರಿನ ಸಮಸ್ಯೆ ಬಾರದಂತೆ ಲೋಡ್ ಶೆಡ್ಡಿಂಗ್ ಆಗದಂತೆ ವಿದ್ಯುತ್ ಅಭಾವ ಬರದಂತೆ ಬೇರೆ ಬೇರೆ ಯೋಜನೆ ತರುತ್ತಿದ್ದೇನೆ. ಮಂಗಳೂರಿನಿಂದ ಅಂಡರ್ ಗ್ರೌಂಡ್ ಮೂಲಕ ಪವರ್ ಒದಗಿಸುವ ಯೋಜನೆ ಇದೆ. ವಿದ್ಯುತ್, ಕುಡಿಯುವ ನೀರು, ರಸ್ತೆ ಮುಖ್ಯ. ಇಷ್ಟೆಲ್ಲ ಆದರೂ ಸೌಹೌರ್ದತೆ ಮುಖ್ಯ ಎಂದರು.
ಸರಕಾರಿ ಬಸ್‌ಗೆ ಖಾಸಗಿ ಬಸ್‌ನದ್ದೂ ನಿಯಮ ತೊಡಕಾಗುತ್ತಿದೆ. ನಮಗೆ ಹಿಂದೆ ಸೇವೆ ಕೊಟ್ಟ ಖಾಸಗಿ ಸಂಸ್ಥೆಯ ಸೇವೆ ಮರೆಯಬಾರದು. ಎಲ್ಲದ್ದಕ್ಕೂ ನೀತಿ ನಿಯಮ. ಕಾನೂನು ಪ್ರಕಾರ ಸಾಗಬೇಕಿದೆ. ಸರಕಾರಿ ಬಸ್ ತರುವಾಗ ಕೋರ್ಟು ಕಚೇರಿ ಅಲೆದಾಟ ಇದೆ. ಮಂಜನಾಡಿ ನರಿಂಗಾನ ಮೊದಲಾದ ಕಡೆ ಸರಕಾರಿ ಬಸ್ ಬೇಡಿಕೆ ಹೆಚ್ಚಿದೆ. ಸರಕಾರಿಯಷ್ಟೇ ಖಾಸಗಿ ಬಸ್ ಸಂಚಾರ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಜನರಿಗೆ ಪ್ರಯೋಜನವಾಗುವ ವ್ಯವಸ್ಥೆ ಮುಖ್ಯ ಎಂದು ಹೇಳಿದರು.
ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಅಬ್ದುಲ್ ಮಜೀದ್, ಮಾಜಿ ಅಧ್ಯಕ್ಷ ಮಹಾಬಲ ಹೆಗ್ಡೆ, ಬಶೀರ್, ಅಧಿಕಾರಿಗಳು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಪಂಚಾಯಿತಿ ಮಾಜಿ ಅಧ್ಯಕ್ಷ ಬದ್ರುದ್ದೀನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.