Mangalore: ಮಂಗಳೂರಿಗಿಲ್ಲ ನೀರಿನ ಸಮಸ್ಯೆ
ಮಂಗಳೂರು: ಈಗಾಗಲೇ ತುಂಬೆ ಡ್ಯಾಂನಲ್ಲಿ 6 ಮೀಟರ್ ನೀರು ಇದ್ದು, ಕಳೆದ ವರ್ಷ ಇದೇ ದಿನದಲ್ಲಿ 5.6 ಮೀಟರ್ ನೀರು ಇತ್ತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಮಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗ ಬಿಳಿಯೂರಿನ ಸಣ್ಣ ಡ್ಯಾಂನಲ್ಲಿ 4 ಮೀಟರ್ ನೀರು ಇದ್ದು, ಒಳ ಹರಿವು ಇರುವುದರಿಂದ ಡ್ಯಾಂನ ನೀರು ನದಿಗೆ ಹರಿಯುತ್ತಿದೆ. ತುಂಬೆ ಡ್ಯಾಂನಲ್ಲಿ ನೀರಿನ ಸಮಸ್ಯೆ ಕಂಡುಬಂದಲ್ಲಿ ಆ ಡ್ಯಾಂನಿಂದ ನೀರನ್ನು ಹರಿಯಬಿಡಲಾಗುವುದು. ಅದರೊಂದಿಗೆ ಅರೆಕಾಳ ಡ್ಯಾಂನಲ್ಲಿ ನೀರು ಸಂಪೂರ್ಣವಾಗಿ ಸಂಗ್ರಹವಾಗಿದ್ದು, ನೀರಿನ ಸಮಸ್ಯೆ ಕಂಡುಬಂದಲ್ಲಿ ಅರೆಕಾಳ ಡ್ಯಾಂನಿಂದ ನೀರನ್ನು ಪಂಪ್ ಮಾಡಿ ನೀರನ್ನು ಪೂರೈಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಕೈಗಾರಿಕೆಗೆ ರೇಷನಿಂಗ್ ಮಾಡಲು ಸೂಚಿಸಿದ್ದು, ಕೃಷಿಗೆ ಹೆಚ್ಚು ನೀರನ್ನು ಬಳಕೆ ಮಾಡಬಾರದು ಎಂದು ಸೂಚಿಸಿದ್ದಾರೆ. ಈಗಾಗಲೇ ಅನೇಕ ಕಡೆಗಳಲ್ಲಿ ಅಕ್ರಮವಾಗಿ ಕುಡಿಯುವ ನೀರನ್ನು ಕೃಷಿಗೆ ಬಳಕೆಯಾಗುತ್ತಿರುವ ಬಗ್ಗೆ ಸಂದೇಹವಿದ್ದು, ಅಂತಹ ಘಟನೆಗಳು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡು ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಮಂಗಳೂರಿನ ಜನರು ವಾಹನಗಳನ್ನು ತೊಳೆಯಲು, ಗಿಡಗಳಿಗೆ ನೀರನ್ನು ಹರಿಸಲು ಬಳಸುವ ನೀರನ್ನು ಕಡಿಮೆ ಮಾಡಬೇಕು. ಈಗಾಗಲೇ ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, 27, 29, 30, 41, 42, 43ನೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇರುವುದು ಕಂಡುಬಂದಿದೆ. ಅದರಲ್ಲಿಯೂ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಬೋಳೂರು ಕೊನೆಯ ಸ್ಥಳವಾಗಿದ್ದು, ಅಲ್ಲಿ ಸಮಸ್ಯೆ ಹೆಚ್ಚಿದೆ. ಇಂತಹ ಸ್ಥಳಗಳಿಗೆ ಟ್ಯಾಂಕ್ ಪೂರ್ಣಗೊಳಿಸಿ ನೀರು ಬಿಡುವ ಕಾರ್ಯ ನಡೆಯುತ್ತಿದೆ ಎಂದರು.
ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ಪ್ಯಾಪ್ತಿಯಲ್ಲಿ ೬ ನೀರಿನ ಟ್ಯಾಂಕರ್‌ಗಳು ಇದ್ದು, ಇದರಲ್ಲಿ 2 ಟ್ಯಾಂಕರ್‌ಗಳು ಸುರತ್ಕಲ್ ಪ್ರದೇಶಕ್ಕೆ ಇರಿಸಿದ್ದು, ಇನ್ನು ಉಳಿದ ನಾಲ್ಕು ಟ್ಯಾಂಕರ್‌ಗಳು ಮಂಗಳೂರು ಪ್ರದೇಶದಲ್ಲಿ ಇದ್ದು ಪ್ರತಿನಿತ್ಯ ನೀರು ಇಲ್ಲದ ಪ್ರದೇಶಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದು ಮೇಯರ್ ತಿಳಿಸಿದರು.