Mangalore: ಮಂಗಳಾದೇವಿ ದೇವಸ್ಥಾನದಲ್ಲಿ  ಧ್ವಜಾರೋಹಣ

Mangalore: ಮಂಗಳಾದೇವಿ ದೇವಸ್ಥಾನದಲ್ಲಿ ಧ್ವಜಾರೋಹಣ

 


ಮಂಗಳೂರು: ಮಂಗಳೂರು ಎಂಬ ಹೆಸರು ಕಡಲತಡಿಯಾದ ಈ ನಗರಿಗೆ ಬರಲು ಕಾರಣಕರ್ತೆ, ನಾಮಕರ್ತೆಯಾದ ಊರಿನ ಅಧಿನಾಯಕಿ ಮಂಗಳಾಪುರವಾಸಿನಿ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಧ್ವಜಾರೋಹಣ ನಡೆಯಿತು.

ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ, ಅನುವಂಶಿಕ ಮೊಕ್ತೇಸರ ಎಸ್. ಹರೀಶ್ ಐತಾಳ, ಪರ್ಯಾಯ ಪ್ರಧಾನ ಅರ್ಚಕರಾದ ಎನ್. ವಾಸುದೇವ ಐತಾಳ, ತಂತ್ರಿಗಳಾದ ಸುಬ್ರಹ್ಮಣ್ಯ ಐತಾಳ ಹಾಗೂ ಚಂದ್ರಶೇಖರ ಐತಾಳ, ಅನುವಂಶಿಕ ಅರ್ಚಕ ಮನೆತನದ ಹಿರಿಯರಾದ ಶ್ರೀನಿವಾಸ ಐತಾಳ, ಹರೀಶ್ ಐತಾಳ, ರಾಮಚಂದ್ರ ಐತಾಳ, ವೆಂಕಟೇಶ್ ಐತಾಳ, ಗುರುಪ್ರಸಾದ್ ಐತಾಳ, ಕ್ಷೇತ್ರದ ಸಿಬ್ಬಂದಿಗಳಾದ ರಂಜಿತ್ ಗುಜರನ್ ಉಪಸ್ಥಿತರಿದ್ದರು.

ಗುರುವಾರ ಬೆಳಗ್ಗೆ ಪ್ರಾತಃ ಕಾಲದ ಪೂಜೆಯ ಬಳಿಕ ಬಿಂಬ ಶುದ್ಧಿ ಕಲಶಾಭಿಷೇಕ, ಗಣಹೋಮ, ಮಧ್ಯಾಹ್ನ ಮಹಾಪೂಜೆಯ ಬಳಿಕ 12.30ಕ್ಕೆ ಧ್ವಜಾರೋಹಣ ನಡೆಯಿತು. ಇಂದಿನಿಂದ ಏ.3ರ ವರೆಗೆ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ. ಏ. 1ರಂದು ಮಧ್ಯಾಹ್ನ ರಥಾರೋಹಣ, ರಾತ್ರಿ 7ಕ್ಕೆ ರಥೋತ್ಸವ ನಡೆಯಲಿದೆ. ವಿಶೇಷ ಬಲಿ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ, ಶಯನ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಚೆಂಡೆ ಸುತ್ತು ವಿಶೇಷ ಆಕರ್ಷಣೀಯವಾಗಿದೆ.

ಏ. 2ರಂದು ಸೂರ್ಯೋದಯದ ವೇಳೆ ಕವಾಟೋದ್ಘಾಟನೆ, ಅಭಿಷೇಕ ಪೂಜೆ, ಅಷ್ಟಾವದಾನ, ತೀರ್ಥಪ್ರಸಾದ, ಬಲಿ, ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಸಂಜೆ 7 ಗಂಟೆಗೆ ಬಲಿ ಹೊರಟು ಅವಭೃತ ಸ್ನಾನ, ಬಟ್ಟಲು ಕಾಣಿಕೆ ಧ್ವಜಾವರೋಹಣ ನಡೆಯಲಿದೆ. ಏ. 3ರಂದು ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಮಾ. 28ರಿಂದ ಏ.3 ರ ವರೆಗೆ ಪ್ರತಿ ದಿನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಮಾ. 28ರಿಂದ 31ರ ವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ಬಯನ ಬಲಿ, ಮಹಾಪೂಜೆ, ಭೂತ ಬಲಿ ನಡೆಯಲಿದೆ.

ಶ್ರೀ ದೇವಿಯ ಶಯನಕ್ಕೆ ಮಲ್ಲಿ ಹೂವನ್ನು ತಂದು ಕೊಡುವವರು ಏ. 1ರಂದು ಸಂಜೆಯೊಳಗೆ ದೇವಳದ ಕಚೇರಿಗೆ ತಂಡು ಕೊಡಬೇಕು. ಏ. 2ರಂದು ಮಂಗಳವಾರ 9.30ಕ್ಕೆ ಹರಕೆ ತುಲಾಭಾರ ಸೇವೆ ನಡೆಯಲಿದೆ. ಮಾ. 29ರಂದು ಮತ್ತು ೩೦ರಂದು ಬೆಳಗ್ಗೆ 9.30ರಿಂದ 1ರ ವರೆಗೆ ಸೀರೆಗಳ ಹರಾಜು ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article