Mangalore: ಬಿಜೆಪಿ ಮಾತಿನಲ್ಲಿ ಯಾವುದೇ ಹುರುಳಿಲ್ಲ
ಮಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಬಿಜೆಪಿ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಇತ್ತೀಚಿನ ಬಜೆಟ್‌ನಲ್ಲಿ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲಿಡುವುದರ ಜತೆಗೆ ಉಳಿದ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು 1.20 ಲಕ್ಷ ಕೋಟಿ ರೂ. ಒದಗಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿಗೆ ಯಾವುದೇ ಕೊರತೆ ಆಗಿಲ್ಲ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜೊತೆಗೆ ರಾಜ್ಯದ ಅಭಿವೃದ್ಧಿಯೂ ಆಗಿದೆ ಎಂದರು.
ಯಾವುದೇ ಭ್ರಷ್ಟಾಚಾರವಿಲ್ಲದೆ ಗ್ಯಾರಂಟಿ ಯೋಜನೆಗಳು ಜನತೆಗೆ ತಲುಪುತ್ತಿವೆ. ಇದರಿಂದಾಗಿ ಜನರ ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಾಗಿದ್ದು, ಬಿಜೆಪಿ ಅವಧಿಗಿಂತ ಶೇ.18ರಷ್ಟು ಅಧಿಕ ತೆರಿಗೆ ಸಂಗ್ರಹವಾಗಿದೆ. 2023-24ರಲ್ಲಿ ಗುಜರಾತ್‌ನಲ್ಲಿ ಕೇವಲ 2.2 ಬಿಲಿಯನ್ ಡಾಲರ್ ನೇರ ಹೂಡಿಕೆ ಆಗಿದ್ದರೆ, ಕರ್ನಾಟಕದಲ್ಲಿ 20.4 ಬಿ. ಡಾಲರ್ ಹೂಡಿಕೆ ಆಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಭದ್ರತಾ ಯೋಜನೆಗೆ ಕೇಂದ್ರದ ಪಾಲು 525 ಕೋಟಿ ರೂ. ಇದ್ದರೆ, ರಾಜ್ಯದ ಪಾಲು 17 ಪಟ್ಟು 9 ಸಾವಿರ ಕೋಟಿ ರೂ ಇದೆ. ಆಯುಷ್ಮಾನ್‌ಗೆ ಕೇಂದ್ರದ್ದು 187 ಕೋಟಿ ರೂ. ಆದರೆ ರಾಜ್ಯ ನೀಡೋದು 748 ಕೋಟಿ ರೂ. ಆಗಿದೆ ಎಂದವರು ವಿವರ ನೀಡಿದರು.
ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ 3 ಸಾವಿರ ಕೋಟಿ ರೂ. ನೀಡಿರುವುದನ್ನೇ ಬಿಜೆಪಿಯವರು ಬೊಟ್ಟು ಮಾಡುತ್ತಿದ್ದಾರೆ. ಆದರೆ ಸಾವಿರಾರು ಕೋಟಿ ರೂ.ಗಳನ್ನು ದೇವಾಲಯಗಳ ಅಭಿವೃದ್ಧಿಗೆ ನೀಡಿದ್ದೇವೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ಮಮತಾ ಗಟ್ಟಿ, ಭರತ್ ಮುಂಡೋಡಿ. ಟಿ.ಕೆ.ಸುಧೀರ್, ಎ.ಸಿ.ವಿನಯರಾಜ್, ಸುದರ್ಶನ್, ಜಾಕಿಂ, ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.