Putturu: ಬೆದ್ರೋಡಿಯಲ್ಲಿ ಕಾಣಿಸಿಕೊಂಡ ‘ಒಂಟಿಸಲಗ’
Tuesday, March 12, 2024
ಪುತ್ತೂರು: ಕಾಡು ಪ್ರದೇಶದ ಸಮೀಪವಿರುವ ಕಡಬ ಪರಿಸರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಒಂಟಿ ಸಲಗ ಇದೀಗ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಭಾಗದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಭಾಗದಲ್ಲಿ ಮಂಗಳವಾರ ಮುಂಜಾನೆ ಕಂಡುಬಂದಿದೆ. ಕಡಬ ಪರಿಸರದಲ್ಲಿ ಒಂಟಿ ಸಲಗದಿಂದ ಹಲವಾರು ಪ್ರಾಣಿಹಾನಿಯಾಗಿದ್ದು, ಕೃಷಿ ನಾಶವಾಗಿದೆ. ಆನೆಯ ಉಪಟಳದಿಂದ ರಕ್ಷಣೆಗಾಗಿ ಕಡಬ ಭಾಗದಲ್ಲಿ ಹೋರಾಟಗಳನ್ನು ಜನತೆ ನಡೆಸಿದ್ದರು. ಅರಣ್ಯ ಇಲಾಖೆ ಆನೆಯ ಉಪಟಳ ತಡೆಯುವಲ್ಲಿ ಒಂದಷ್ಟು ಪ್ರಯತ್ನಗಳನ್ನು ನಡೆಸಿತ್ತು. ಆದರೂ ಈ ಭಾಗದಲ್ಲಿ ಒಂಟಿ ಸಲಗಗಳ ಉಪಟಳ ಸದಾ ಜನತೆಯನ್ನು ಕಾಡುತ್ತಿದೆ. ಕಡಬ ಭಾಗದ ಬಿಳಿನೆಲೆ, ಕೊಂಬಾರು ಸಹಿತ ಕಾಡಿನ ತೀರಪ್ರದೇಶಗಳಲ್ಲಿ ಆನೆಗಳ ಸಮಸ್ಯೆ ಪ್ರತೀ ವರ್ಷವೂ ಜನತೆಯನ್ನು ಭಯಭೀತರನ್ನಾಗಿಸುತ್ತಿದೆ. ಈ ಪ್ರದೇಶದಲ್ಲಿ ಹಲವಾರು ರೈತರ ಕೃಷಿ ಆನೆಗಳಿಂದಾಗಿ ನಾಶವಾಗುತ್ತಿದೆ. ಇದೀಗ ಬಜತ್ತೂರು ಗ್ರಾಮದ ಜನತೆಯಲ್ಲೂ ಈ ಭೀತಿ ಉಂಟಾಗಿದೆ.
ಮಂಗಳವಾರ ಮುಂಜಾನೆ ಬೆದ್ರೋಡಿ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಈ ಒಂಟಿ ಸಲಗ ಕಂಡುಬಂದಿತು. ನಂತರ ನದಿಯಲ್ಲೇ ಸಾಗಿದ ಈ ಸಲಗ ರಬ್ಬರ್ ಕಾಡಿನೊಳಗೆ ನುಸುಳಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಒಂಟಿ ಸಲಗ ಈ ಭಾಗಕ್ಕೆ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದರೂ ಬಹುತೇಕ ಕಡಬ ಪರಿಸರದಿಂದ ಬಂದಿರಬಹುದು ಎನ್ನಲಾಗುತ್ತಿದೆ. ಕೊಂಬಾರು ಭಾಗದಿಂದ ಪಟ್ರಮೆ ಮೂಲಕ ನದಿ ತೀರಕ್ಕೆ ಬಂದ ಈ ಸಲಗ ನೇತ್ರಾವತಿ ತೀರದಲ್ಲಿಯೇ ಬಂದು ಬೆದ್ರೋಡಿ ಭಾಗಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಪ್ರಸ್ತುತ ಈ ಸಲಗದಿಂದ ಯಾವುದೇ ಕೃಷಿ ಹಾನಿಯಾದ ಬಗ್ಗೆ ತಿಳಿದುಬಂದಿಲ್ಲ. ಆದರೆ ನೇತ್ರಾವತಿಯ ಒಂದು ತೀರವಾದ ಬಜತ್ತೂರು ಹಾಗೂ ಇನ್ನೊಂದು ತೀರವಾದ ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಭಾಗದ ಜನತೆಗೆ ಸಲಗದ ಭೀತಿ ಉಂಟಾಗಿದೆ.