
Bantwal: ಬಾವಿಯೊಳಗೆ ನೇಣು ಬಿಗಿದು ಕೃಷಿಕನ ಆತ್ಮಹತ್ಯೆ
ಬಂಟ್ವಾಳ: ನೀರಿನ ಸಮಸ್ಯೆಯಿಂದ ಕೃಷಿ ನಾಶವಾದ ಹಿನ್ನಲೆಯಲ್ಲಿ ಮನನೊಂದ ಕೃಷಿಕರೋರ್ವರು ಬಾವಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾ.ನ ಪುದು ಗ್ರಾಮದ ಪೆಲಪಾಡಿ ಎಂಬಲ್ಲಿ ಬುಧವಾರ ನಡೆದಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ ಭಾಸ್ಕರ್ ರೈ (53) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ನಿವಾಸಿಯಾದ ಭಾಸ್ಕರ್ ರೈ ಅವರು ಪುದು ಗ್ರಾಮದ ಪೆಲಪಾಡಿ ಎಂಬಲ್ಲಿ ಭಾವನ ಮನೆಯ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದ ಅವರಿಗೆ ಇತ್ತೀಚಿನ ದಿನಗಳಲ್ಲಿ ತಮ್ಮ ಕೃಷಿಗೆ ನೀರಿನ ಸಮಸ್ಯೆಯಿಂದಾಗಿ ಕೃಷಿ ನಾಶಗೊಂಡಿತ್ತು ಎನ್ನಲಾಗಿದೆ.
ಇದರಿಂದ ಮನನೊಂದಿದ್ದ ಭಾಸ್ಕರ್ ರೈ ಅವರು ಪುದು ಗ್ರಾಮದ ಪೆಲಪಾಡಿಯಲ್ಲಿರುವ ತನ್ನ ಪತ್ನಿಯ ಸಹೋದರನ ಮನೆಗೆ ಬಂದಿದ್ದರು. ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ವೈದ್ಯರೊರ್ವರಿಂದ ಔಷಧಿ ಪಡೆದು ವಾಪಸ್ ಭಾವನ ಮನೆಯಲ್ಲಿ ಉಳಿದುಕೊಂಡಿದ್ದರು.
ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವರು ಮುಂಜಾನೆಯ ಹೊತ್ತಿಗೆ ನೋಡಿದಾಗ ಮಲಗಿದ್ದ ಸ್ಥಳದಿಂದ ಕಾಣೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಮನೆ ಪಕ್ಕದ ಬಾವಿಯಲ್ಲಿ ನೀರು ಎಳೆಯಲು ಹಾಕಿರುವ ರಾಟೆಯ ಕಬ್ಬಿಣದ ಕೊಂಡಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಮ್ಮ ಶುಭಕರ ರೈ ದೂರಿನಲ್ಲಿ ತಿಳಿಸಿದ್ದಾರೆ.
ಕೃಷಿ ನಾಶದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.