Beltangadi: ಶಾಸಕ ಪೂಂಜ ಪ್ರಕರಣ-ನೋಟೀಸ್‌ಗೆ ಉತ್ತರ ನೋಡಿ ಮುಂದಿನ ಕ್ರಮ

Beltangadi: ಶಾಸಕ ಪೂಂಜ ಪ್ರಕರಣ-ನೋಟೀಸ್‌ಗೆ ಉತ್ತರ ನೋಡಿ ಮುಂದಿನ ಕ್ರಮ


ಬೆಳ್ತಂಗಡಿ: ಶಾಸಕ ಪೂಂಜಾ ಅವರ ಮನೆಗೆ ಅವರನ್ನು ನಿಯಮಾನುಸಾರ ವಿಚಾರಣೆಗೆ ಅಂತ ಕರೆ ತರಲು ನಾವು ಮೂರು ಮಂದಿ ಪೊಲೀಸರನ್ನು ಮಾತ್ರ ಕಳಿಸಿದ್ದೇವೆ. ಆದರೆ ಅಲ್ಲಿ ಇದ್ದಕ್ಕಿದ್ದಂತೆ ಜನ ಜಮಾಯಿಸಲು ಆರಂಭಿಸಿದ್ದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಿರಲಿ ಎಂದು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕಾಗಿ ಬಂತು ಎಂದು ದ.ಕ. ಜಿಲ್ಲಾ ಎಸ್.ಪಿ ರಿಷ್ಯಂತ್ ಅವರು ಸ್ಪಷ್ಟನೆ ನೀಡಿದ್ದಾರೆ. 

ಧರ್ಮಸ್ಥಳ ಠಾಣೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಮನೆಯಲ್ಲಿ ಆಗಿರುವ ಘಟನೆ ಹಾಗೂ ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಗಿರುವ ಚರ್ಚೆಗಳಿಗೆ ಉತ್ತರಿಸಿದರು. ಸ್ಥಳದಲ್ಲಿದ್ದ ಜನಪ್ರತಿನಿಧಿಗಳು ನಮ್ಮಲ್ಲಿ ವಿನಂತಿಸಿಕೊಂಡಂತೆ, ಶಾಸಕರ ಮನೆಯ ಕಿರಿದಾದ ದಾರಿಯಲ್ಲಿ ಈಗಾಗಲೇ ಜನ ಜಮಾಯಿಸಿದ್ದಾರೆ. ಅದರ ಮಧ್ಯೆ ಶಾಸಕರನ್ನು ಠಾಣೆಗೆ ಕರೆದುಕೊಂಡು ಬರಲು ಕಷ್ಟವಾಗಬಹುದು. ಆದ್ದರಿಂದ ನಾವು ನಮ್ಮ ಕಾರ್ಯಕರ್ತರನ್ನು ಮರಳಲು ಸೂಚಿಸುತ್ತೇವೆ. ನೀವೂ ನಿಮ್ಮ ಪೊಲೀಸ್ ಸಿಬ್ಬಂದಿಯನ್ನು ವಾಪಾಸು ಕರೆಸಿಕೊಳ್ಳಿ ಎಂದಿದ್ದಕ್ಕೆ ಆ ರೀತಿ ಕ್ರಮ ಕೈಗೊಂಡಿದ್ದೇವೆ. ಬಳಿಕ ಶಾಸಕರನ್ನು ನಾವು ಠಾಣೆಗೆ ವಿಚಾರಣೆಗೆ ಕರೆತಂದು ವಿಚಾರಣೆ ನಡೆಸಿ, ಜಾಮೀನು ನೀಡಿ ಕಳಿಸಿಕೊಟ್ಟಿದ್ದೇವೆ ಎಂದು ವಿವರಿಸಿದರು.

ಮೊದಲ ಕೇಸಿನಲ್ಲಿ ಶಾಸಕರಿಗೆ ನಿಯಮಾನುಸಾರ ನೋಟೀಸು ನೀಡಿದ್ದೇವೆ. ಎರಡನೇ ಕೇಸಿನಲ್ಲಿ ಠಾಣೆಯಲ್ಲೇ ಜಾಮೀನು ನೀಡಿದ್ದೇವೆ. ನೋಟೀಸ್‌ಗೆ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ನೋಡಿ ಮುಂದಿನ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದರು.

ಕಾನೂನಿನಡಿ ಎಲ್ಲರೂ ಸಮಾನರು. ಪೊಲೀಸರು ಹೋದರೆ ಸಾವಿರ ಜನ ಸೇರಿಸಿ ನೋಟೀಸೇ ನೀಡಬಾರದು ಅಂತ, ಎರಡು ಸಾವಿರ ಜನ ಸೇರಿಸಿದರೆ ವಿಚಾರಣೆನೇ ಮಾಡಬಾರದು ಅಂತ, ಐದು ಸಾವಿರ ಜನ ಸೇರಿಸಿ ಕೇಸೇ ಮಾಡಬಾರದು ಅಂತಹೇಳಿದರೆ ಹೇಗೆ ಸಾಧ್ಯವಾಗುತ್ತದೆ. ಜನ ಸೇರಿದ ಆಧಾರದ ಮೇಲೆ ಕೇಸು ಬದಲಾಗಲ್ಲ. ತಪ್ಪು ಮಾಡಿದರೆ ಕೇಸು ಆಗಿಯೇ ಆಗುತ್ತದೆ. ಕಾನೂನು ಎಂದರೆ ಲಕ್ಷ ಜನ ಸೇರಿಸಿದ್ರೂ ಅದೇ ಕಾನೂನು ಅದರಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.

ಅಕ್ರಮ ಗಣಿಗಾರಿಕೆ ಆಗಿರುವ ಜಾಗ ಸರಕಾರಿಯೋ, ಖಾಸಗಿಯೋ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ಖಾಸಗಿಯಾಗಿದ್ದರೆ ಅವರ ವಿರುದ್ದವೂ ಪ್ರಕರಣ ದಾಖಲಿಸಿ ಅವರನ್ನೂ ಬಂಧಿಸುತ್ತೇವೆ. ತಹಶಶೀಲ್ದಾರ್ ಅವರು ದಾಳಿ ಮಾಡಿದಾಗ ಅಲ್ಲಿನ ಕಾರ್ಮಿಕರು ಯಾರೆಲ್ಲಾ ಕ್ವಾರಿ ನಡೆಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದರ ಆಧಾರದಲ್ಲೇ ನಮಗೆ ತಹಶೀಲ್ದಾರ್ ಕಡೆಯಿಂದ ದೂರು ಬಂದಿದೆ. ಆ ಹಿನ್ನೆಲೆಯಲ್ಲಿ ನಾವು ಒಬ್ಬ ಆರೋಪಿಯನ್ನು ಬಂಧಿಸಿದ್ದೇವೆ. ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆ ಬಗ್ಗೆ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಆತನ್ನು ಕೂಡಲೇ ಬಂಧಿಸಲಾಗುವುದು. ಪೊಲೀಸರು ಒಟ್ಟು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು. 

ಜಾಗೃತರಾಗಿ..:

ಕಳೆದ ಕೆಲ ದಿನಗಳಿಂದ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿವಿಧ ರೀತಿಯಲ್ಲಿ ಜನರನ್ನು ವಂಚಿಸಿ ಹಣವನ್ನು ಅಪಹರಿಸುವ ಕಾರ್ಯ ನಡೆಯುತ್ತಿದೆ. ಇಂತಹ ವಿಚಾರಗಳ ಬಗ್ಗೆ ಜನರು ಜಾಗೃತರಾಗುವ ಅಗತ್ಯವಿದೆ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದ ಅವರು, ಜನರು ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗ್ರತೆ ವಹಿಸುವಂತೆ ವಿನಂತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article