
Kolluru: ಕೊಲ್ಲೂರಿನಲ್ಲಿ ಪರಿಸರ ಹಾನಿ, ದೂರು-ಹಸಿರು ಪೀಠದಲ್ಲಿ ವಿಚಾರಣೆಗೆ ಅಂಗೀಕಾರ
ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ ಬಗ್ಗೆ ಚೆನ್ನೈನಲ್ಲಿನ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಘನ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.
ಕೊಡಚಾದ್ರಿ ಬೆಟ್ಟಗಳಿಂದ ಹರಿದು ಬರುವ ಪುಣ್ಯ ತೀರ್ಥಗಳು ಸಂಗಮವಾಗಿ ಅಗ್ನಿ ತೀರ್ಥ, ಕಾಶಿ ತೀರ್ಥ ಹಾಗೂ ಸೌಪರ್ಣಿಕೆಯಾಗಿ ಕೊಲ್ಲೂರಿನಲ್ಲಿ ಹರಿಯುತ್ತಿವೆ. ಈ ಪುಣ್ಯ ಕ್ಷೇತ್ರಗಳಲ್ಲಿ ಸ್ನಾನ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ಪರಿಹಾರವಾಗುತ್ತವೆ ಹಾಗೂ ಚರ್ಮ ಸಂಬಂಧಿತ ಕಾಯಿಲೆಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆಗಳು ಶ್ರೀ ಮೂಕಾಂಬಿಕಾ ದೇವಿಯ ಕೋಟ್ಯಾಂತರ ಭಕ್ತರ ನಂಬಿಕೆಯಾಗಿದೆ. ವಾರ್ಷಿಕ ಜಾತ್ರೆಯ ತೆಪ್ಪೋತ್ಸವಕ್ಕೂ ಇದೇ ಪುಣ್ಯ ನದಿಯಲ್ಲಿ ಶ್ರೀ ದೇವಿಯ ಪಾರಂಪರಿಕ ಉತ್ಸವಾಚರಣೆಗಳು ನಡೆಯುತ್ತದೆ.
ದುರಂತವೆಂದರೆ ಇತ್ತೀಚಿನ ಕೆಲ ವರ್ಷಗಳಿಂದ ಕೊಲ್ಲೂರಿನಲ್ಲಿ ತಲೆ ಎತ್ತಿರುವ ಹಾಗೂ ನಿರ್ಮಾಣವಾಗುತ್ತಿರುವ ವಸತಿ ಗೃಹಗಳು, ಬಹು ಮಹಡಿಯ ಕಟ್ಟಡಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಅನುಪಯುಕ್ತ ದ್ರವ ಹಾಗೂ ಘನ ತ್ಯಾಜ್ಯಗಳು ನೇರವಾಗಿ ಪುಣ್ಯ ನದಿಯನ್ನು ಸೇರುವುದರಿಂದ ನದಿಯ ಪಾವಿತ್ರ್ಯತೆ ಹಾಳಾಗುವ ಜೊತೆಯಲ್ಲಿ ನೀರಿನಾಶ್ರಯ ಹೊಂದಿರುವ ಜಲಚರಗಳು ಹಾಗೂ ಪರಿಸರದ ಪ್ರಾಣಿ ಸಂಕುಲದ ಜೀವಕ್ಕೂ ಕುತ್ತು ತರುತ್ತಿದೆ.
ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು, ಲೇಖನಗಳು ಪ್ರಕಟವಾಗಿದ್ದರೂ ಈವರೆಗೂ ಸಮಸ್ಯೆಗಳು ಪರಿಹಾರ ಕಾಣದೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೆ ಇದೆ. ನದಿಯ ಪಾವಿತ್ರ್ಯತೆ ಹಾಗೂ ಪರಿಸರದ ಉಳಿವಿಗಾಗಿ ಸಾಕಷ್ಟು ಸಾರ್ವಜನಿಕ ಹೋರಾಟ ನಡೆಸಿದರೂ, ಅದು ಕೇವಲ ಅರಣ್ಯ ರೋಧನವಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಶ್ರೀ ಮೂಕಾಂಬಿಕಾ ದೇವಿಯ ಭಕ್ತರು, ಪರಿಸರಾಸಕ್ತರ ಸಲಹೆ ಪಡೆದುಕೊಂಡು ಮಾಹಿತಿ ಹಕ್ಕಿನಲ್ಲಿ ಅನೇಕ ದಾಖಲೆಗಳನ್ನು ಪಡೆದುಕೊಂಡು, ನ್ಯಾಯಕ್ಕಾಗಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಗೆ ಸಂಬಂಧಿಸಿದ ದಾಖಲೀಕರಣವಾದ ಬಳಿಕ ಘನ ನ್ಯಾಯಾಲಯವೂ ಅರ್ಜಿಯ ವಿಚಾರಣೆಗೆ ಅಂಗೀಕಾರ ನೀಡಿದ್ದು, ಪ್ರಕರಣದ ಸಂಖ್ಯೆ 125/2024(ಎಸ್ ಝಡ್)ರಂತೆ ಘನ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆಯಲಿದೆ.
ವಿಚಾರಣೆಯ ಹಂತದಲ್ಲಿ ಕೊಲ್ಲೂರು ಪರಿಸರದಲ್ಲಿ ಅತಿಕ್ರಮವಾಗಿರುವ ಸರ್ಕಾರಿ ಹಾಗೂ ಸಾರ್ವಜನಿಕ ಭೂಮಿಗಳು ಕುರಿತು, ನಿಯಮ ಬಾಹಿರ ಕಟ್ಟಡಗಳ ಕುರಿತು, ಅಸಮರ್ಪಕ ಒಳಚರಂಡಿ ಕುರಿತು, ಪುಣ್ಯ ಕ್ಷೇತ್ರದ ಪರಿಸರಕ್ಕೆ ಧಕ್ಕೆಯಾಗುವ ಸಾರ್ವಜನಿಕ ಶೌಚಾಲಯಗಳ ಕುರಿತು ಹಾಗೂ ಇವುಗಳಿಂದ ಪರಿಸರದ ನೈರ್ಮಲ್ಯದ ಕುರಿತು ಆಗುತ್ತಿರುವ ಹಾನಿಗಳನ್ನು ಘನ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ಈ ಪ್ರಯತ್ನಗಳ ಹಿಂದಿನ ಶಕ್ತಿ, ಪರಿಸರ ಹೋರಾಟಗಾರ ಕೊಲ್ಲೂರಿನ ಹರೀಶ್ ತೋಳಾರ್ ತಿಳಿಸಿದ್ದಾರೆ.
ಶ್ರೀ ಮೂಕಾಂಬಿಕಾ ದೇವಿಯ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಘಾಸಿಯಾಗಿರುವ ಈ ಎಲ್ಲಾ ವಿಚಾರಗಳಿಗೆ ಘನ ನ್ಯಾಯಾಲಯದಿಂದ ನ್ಯಾಯ ದೊರಕಬಹುದು ಎನ್ನುವ ವಿಶ್ವಾಸವಿದೆ ಎನ್ನುವ ತೋಳಾರ್, ಶ್ರೀ ದೇವಿಯ ಭಕ್ತರ ನೆಲೆಯಲ್ಲಿ ಮುಂದಾಗಿರುವ ಈ ಕಾನೂನು ಹೋರಾಟದಲ್ಲಿ ಕರ್ನಾಟಕ ಸರ್ಕಾರ ಸೇರಿದಂತೆ ಎಲ್ಲರ ಸಹಕಾರ ಬಯಸುವುದಾಗಿಯೂ ತಿಳಿಸಿದ್ದಾರೆ.