
Mangalore: ಅತಿಥಿ ಉಪನ್ಯಾಸಕರ ಬೆಂಬಲ: ಡಾ. ಹನುಮಂತ ಗೌಡ ಆರ್. ಕಲ್ಮನಿ
ಮಂಗಳೂರು: ವಿಧಾನ ಪರಿಷತ್ ನೈರುತ್ಯ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಎಸ್.ಆರ್. ಹರೀಶ್ ಆಚಾರ್ಯ ಅವರಿಗೆ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತ ಗೌಡ ಆರ್. ಕಲ್ಮನಿ ಹೇಳಿದರು.
ಅತಿಥಿ ಉಪನ್ಯಾಸಕರ ಸಂಘದ ಕಾನೂನು ಸಲಹೆಗಾರ ಎಸ್.ಪಿ. ದಿನೇಶ್ ಅವರು ಅತಿಥಿ ಉಪನ್ಯಾಸಕರ ಹೋರಾಟಗಳಿಗೆ, ಸೇವಾ ಭದ್ರತೆಗೆ ಮತ್ತು ನಮ್ಮ ಎಲ್ಲ ಬೇಡಿಕೆಗಳಿಗೆ ಸಂಘಟನಾತ್ಮಕನಾಗಿ ಸದಾ ಬೆನ್ನೆಲುಬಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಅತಿಥಿ ಉಪನ್ಯಾಸಕರ ಸಂಕಷ್ಟದ ಕಾಲದಲ್ಲಿ ನಮ್ಮ ಜತೆಗಿದ್ದೇವೆ ಎಂದು ಕೆಲವು ರಾಜಕಾರಣಿಗಳು ಬೊಗಳೆ ಬಿಡುತ್ತಿರುವುದನ್ನು ನಿಲ್ಲಿಸಬೇಕು. ನಮ್ಮ ಉಪನ್ಯಾಸಕರ ಬೀದಿಯ ಹೋರಾಟ, ಪಾದಯಾತ್ರೆ ಸೇರಿ ನಾನಾ ಹೋರಾಟದ ಸಂದರ್ಭ ಕಾಣಿಸಿಕೊಳ್ಳದೆ ಚುನಾವಣೆ ಬಂದಾಗ ಕೆಲವರು ನಮ್ಮ ಹೆಸರು ಉಪಯೋಗ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ನಮ್ಮ ಸಂಘದ ಪ್ರತಿಯೊಂದು ಹೋರಾಟಗಳಿಗೆ ಕಾನೂನು ಸಲಹೆ ನೀಡುವ ದಿನೇಶ್ ಅವರಿಗೆ ಪದವೀಧರ ಕ್ಷೇತ್ರದಲ್ಲಿ ಹಾಗೂ ಉಪನ್ಯಾಸಕರ ಕಷ್ಟಗಳಿಗೆ ಸ್ಪಂದಿಸುವ ಹರೀಶ್ ಆಚಾರ್ಯ ಅವರಿಗೆ ಶಿಕ್ಷಕರ ಕ್ಷೇತ್ರದಲ್ಲಿ ಬೆಂಬಲ ನೀಡುತ್ತಿದ್ದೇವೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಚಂದ್ರ ಶೇಖರ ಕಾಳನ್ನವರ, ಕೋಶಾಧ್ಯಕ್ಷ ಪ್ರೊ. ಕೃಷ್ಣಾರೆಡ್ಡಿ ಬಿ., ಮಂಗಳೂರು ಜಿಲ್ಲಾಧ್ಯಕ್ಷ ಮನಮೋಹನ್, ಜಿಲ್ಲಾ ಕೋಶಾಧಿಕಾರಿ ರಂಜಿತ್ ಪಿ.ಜೆ. ಉಪಸ್ಥಿತರಿದ್ದರು.