
Mangalore: ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಮತ್ತೆ ಅಗೆಯುವುದು ಭ್ರಷ್ಟಾಚಾರದ ವಿರಾಟ್ ಸ್ವರೂಪ: ಸಿಪಿಐಎಂ ಗಂಭೀರ ಆರೋಪ
ಮಂಗಳೂರು: ಮಂಗಳೂರು ನಗರದಾದ್ಯಂತ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಒಂದೆರಡು ತಿಂಗಳಲ್ಲಿ ಮತ್ತೆ ಅಗೆಯುವುದು ಬಿಜೆಪಿ ಆಡಳಿತದ ಭ್ರಷ್ಟಾಚಾರದ ವಿರಾಟ್ ಸ್ವರೂಪವಾಗಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯು ಗಂಭೀರ ಆರೋಪವನ್ನು ವ್ಯಕ್ತಪಡಿಸಿದೆ.
ವಿವಿಧ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ವನ್ನು ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ರಸ್ತೆ ಕಾಮಗಾರಿಗಾಗಿಯೇ ವಿನಿಯೋಗಿಸಲಾಗುತ್ತದೆ. 40 ಪರ್ಸೆಂಟ್ ಕಮಿಷನ್ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ನುಂಗಿ ಹಾಕಲು ಏಕೈಕ ಸಾಧನ ರಸ್ತೆ ಅಭಿವೃದ್ಧಿಯಾಗಿದೆ. ರಸ್ತೆಗೆ ಕಾಂಕ್ರೀಟ್ ಮಾಡುವ ಸಂದರ್ಭದಲ್ಲಿ ರಸ್ತೆಯ ಅಡಿ ಭಾಗದಲ್ಲಿರುವ ಕೇಬಲ್, ನೀರಿನ ಪೈಪ್ ಲೈನ್, ಚರಂಡಿ ಸೇರಿದಂತೆ ಎಲ್ಲವುಗಳನ್ನು ರಸ್ತೆಯ ಬದಿಗೆ ಸರಿಸಿದ ಬಳಿಕವೇ ಕಾಂಕ್ರೀಟ್ ಮಾಡಬೇಕೆಂಬ ನಿಯಮವಿದ್ದರೂ, ಅವೆಲ್ಲವುಗಳನ್ನು ಗಾಳಿಗೆ ತೂರಿ, ಕಾಮಗಾರಿಗಾಗಿ ಮೀಸಲಿಟ್ಟ ಕೋಟ್ಯಾಂತರ ಹಣ ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಯದಿದ್ದರೆ ವಾಪಸ್ ಹೋಗುವ ಭೀತಿಯಿಂದ ತರಾತುರಿಯಲ್ಲಿ ಇದ್ದ ರಸ್ತೆಗೆ ಕಾಂಕ್ರೀಟ್ ಮಾಡಲಾಗುತ್ತದೆ.
ಬಳಿಕ ನೀರಿನ ಪೈಪ್ ಸೋರಿಕೆ ಕಂಡಾಗ, ಕೇಬಲ್ ಹಾಕುವಾಗ ಹಾಗೂ ಒಳಚರಂಡಿ ದುರಸ್ತಿಯ ಹೆಸರಿನಲ್ಲಿ ಅಗಿಂದ್ದಾಗೆ ಅಗೆಯಲಾಗುತ್ತದೆ. ಒಟ್ಟಿನಲ್ಲಿ ರಸ್ತೆಯ ಕಾಂಕ್ರೀಟೀಕರಣಗಿಂತಲೂ ಅಗೆಯುವ ಹೆಸರಿನಲ್ಲಿ ದುಪ್ಪಟ್ಟು ಹಣವನ್ನು ನುಂಗಿ ಹಾಕಲಾಗುತ್ತದೆ.ಇದರಿಂದ ಬಿಜೆಪಿ ಆಡಳಿತದ ಬ್ರಹ್ಮಾಂಡ ಭ್ರಷ್ಟಾಚಾರದ ವಿರಾಟ್ ಸ್ವರೂಪ ಬಹಿರಂಗಗೊಂಡಿದೆ ಎಂದು ಸಿಪಿಐಎಂ ಅಕ್ರೋಶ ವ್ಯಕ್ತಪಡಿಸಿದೆ.
ಬೋಳಾರ ಮುಳಿಹಿತ್ಲು ಪ್ರದೇಶದ ಅತ್ಯಂತ ಪ್ರಮುಖ ರಸ್ತೆಯ ಕಾಂಕ್ರೀಟೀಕರಣ ಕಳೆದ ತಿಂಗಳಷ್ಟೇ ಮುಗಿದಿದ್ದು ಈಗ ಮತ್ತೆ ಕ್ಷುಲ್ಲಕ ಕಾರಣಗಳನ್ನೊಡ್ಡಿ ಮತ್ತೆ ಅಗೆಯಲಾಗಿದೆ. ಇಂತಹ ಅವೈಜ್ಞಾನಿಕ ಕ್ರಮಗಳಿಂದ ಜನತೆಯ ತೆರಿಗೆಯ ಹಣ ವಿಪರೀತ ವಾಗಿ ಪೋಲಾಗುತ್ತಿದ್ದು ಈ ಬಗ್ಗೆ ಮಂಗಳೂರಿನ ಜನತೆ ತೀರಾ ಎಚ್ಚರದಿಂದಿರಬೇಕೆಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.