Udupi: ಮತದಾರರಿಗೆ ಗೆಲುವು ಸಮರ್ಪಣೆ: ಕೋಟ
ಉಡುಪಿ: ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಜೆಡಿಎಸ್ ಮತ್ತು ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ಪ್ರಮುಖವಾಗಿ ಬೂತ್ ಮಟ್ಟದ ಎಲ್ಲ ಕಾರ್ಯಕರ್ತರಿಗೆ ನನ್ನ ಗೆಲುವು ಸಮರ್ಪಿಸುವುದಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ವಿಜೇತ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
2,58,903 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೆ. ಜಯಪ್ರಕಾಶ್ ಹೆಗ್ಡೆ ವಿರುದ್ಧ ಗೆಲುವು ಸಾಧಿಸಿದ ಬಳಿಕ ಬ್ರಹ್ಮಗಿರಿ ಸೈಂಟ್ ಸಿಸಿಲಿ ಶಾಲೆಯ ಮತ ಎಣಿಕೆ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ, ಮಾಧ್ಯಮದೊಂದಿಗೆ ಗೆಲುವಿನ ಸಂತಸ ಹಂಚಿಕೊಂಡರು.
ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು, ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಹಂಬಲದಿಂದ ತನ್ನನ್ನು ಗೆಲ್ಲಿಸಿದ ಮತದಾರರಿಗೆ ಮಾಧ್ಯಮದ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ. ಎನ್‌ಡಿಎ ಒಕ್ಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂದರ್ಭ ಬರುತ್ತದೆ. ಆದರೆ, ನಿರೀಕ್ಷಿತ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಇಂಡಿಯಾ ಒಕ್ಕೂಟ ಒಂದು ಲಕ್ಷ ರೂ ಗ್ಯಾರಂಟಿ ಹೇಳಿಕೆ ನೀಡಿರುವುದು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳಲ್ಲಿ ಸೋಲಿಗೆ ಪ್ರಮುಖ ಕಾರಣ ಸಾಮಾನ್ಯ ಜನರು ಅವರಿಗೆ ಮತ ಚಲಾಯಿಸಿದ್ದಾರೆ. ಏನೇ ಆದರೂ, ನಿರೀಕ್ಷಿತ ಮಟ್ಟ ತಲುಪದಿದ್ದರೂ ಎನ್‌ಡಿಎ ಅಧಿಕಾರ ಸೂತ್ರ ಹಿಡಿಯಲಿದೆ ಎಂಬ ಭರವಸೆ ಇದೆ ಎಂದರು.
ರಾಜ್ಯದಲ್ಲಿ 22 ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ಸ್ವಲ್ಪ ಕಡಿಮೆ ಬಂದಿದೆ. ತುಂಬಾ ಕಡಿಮೆ ಏನೂ ಬಂದಿಲ್ಲ. ಮತ್ತೊಮ್ಮೆ ಎನ್‌ಡಿಎ ಒಕ್ಕೂಟ ಜನತೆಯ ವಿಶ್ವಾಸ ಪಡೆದಿದೆ. ಭಾರತಕ್ಕೆ ನರೇಂದ್ರ ಮೋದಿ ತುಂಬಾ ಕೆಲಸ ಮಾಡಿದ್ದಾರೆ. ಅವರ ಬಡವರ ಕಲ್ಯಾಣ ಯೋಜನೆಗಳು ಕೈಹಿಡಿದಿವೆ. ಕಾಶ್ಮೀರ 370 ರದ್ಧತಿ, ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಯುಷ್ಮಾನ್ ಭಾರತ ಮುಂತಾದ ಸಮಾಜ ಕಲ್ಯಾಣ ಯೋಜನೆಗಳು, ದೇಶದ ಕೋಟ್ಯಂತರ ಬಡವರಿಗೆ ಮನೆ ಕಟ್ಟಿಸಿ ಕೊಟ್ಟಿದ್ದು ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರ ಮೊದಲು ಎನ್ನುವ ಮನೋಭಾವನೆಯೊಂದಿಗೆ ಜಗತ್ತಿನಲ್ಲಿಯೇ ಭಾರತಕ್ಕೆ ಗೌರವ ತಂದುಕೊಟ್ಟ ವ್ಯಕ್ತಿ ಯಾರಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂಬ ಭಾವನೆ ಎಲ್ಲರಲ್ಲಿದೆ. ನಮ್ಮನ್ನು ವಿರೋಧಿಸುವವರೂ ಇದನ್ನು ಒಪ್ಪಿಕೊಳ್ಳುತ್ತಾರೆ ಎಂದರು.
ಆದರೆ, ಕೊನೆಯ ಹಂತದಲ್ಲಿ ಇಂಡಿಯಾ ಒಕ್ಕೂಟದವರು ಒಂದು ಲಕ್ಷ ಕೊಡ್ತೇವೆ, ಕೋಟಿ ಕೊಡಿ ಎಂದು ಗ್ಯಾರಂಟಿ ಕಾರ್ಡ್‌ನಿಂದಾಗಿ ನಮ್ಮ ಸಂಖ್ಯೆ ಕುಸಿಯಲು ಕಾರಣ. ಅಂತೂ ಇಂಡಿಯಾ ಒಕ್ಕೂಟದ ತಂತ್ರ ಸ್ವಲ್ಪಮಟ್ಟಿಗೆ ಕೆಲಸ ಮಾಡಿದ್ದಂತೂ ಸತ್ಯ ಎಂದರು.
ಸದ್ಯದಲ್ಲಿಯೇ ನಾನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುವುದನ್ನು ಕಲಿಯುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ನಗುತ್ತಲೇ ಹೇಳಿದರು.