Bangalore: ಖಾಸಗಿ ಅನುದಾನ ರಹಿತ ಪಪೂ ಕಾಲೇಜುಗಳಿಗೆ ಮುಂದಿನ 10 ವರ್ಷಗಳ ವರೆಗೆ ಮಾನ್ಯತೆ ನವೀಕರಣಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರಿಂದ ಪಪೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ

Bangalore: ಖಾಸಗಿ ಅನುದಾನ ರಹಿತ ಪಪೂ ಕಾಲೇಜುಗಳಿಗೆ ಮುಂದಿನ 10 ವರ್ಷಗಳ ವರೆಗೆ ಮಾನ್ಯತೆ ನವೀಕರಣಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರಿಂದ ಪಪೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ


ಬೆಂಗಳೂರು: ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳು ಇಂದು ವಿಧಾನ ಸೌಧದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪರ ಜೊತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪಪೂ ನಿರ್ದೇಶಕರ ಸಮ್ಮುಖದಲ್ಲಿ ಸಭೆಯನ್ನು ಆಯೋಜಿಸಿದರು. 

ಈ ಸಂಧರ್ಭದಲ್ಲಿ ಕುಪ್ಮದ ಪದಾಧಿಕಾರಿಗಳ ಮನವಿಗೆ ತಕ್ಷಣ ಸ್ಪಂದಿಸಿ ಈ ಶೈಕ್ಷಣಿಕ ವರ್ಷದಿಂದ 10 ವರ್ಷಗಳ ವರೆಗೆ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಮಾನ್ಯತೆಯನ್ನು ನವೀಕರಿಸಲು ಸೂಚನೆಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಆನ್‌ಲೈನ್ ಅರ್ಜಿಯಲ್ಲಿರುವ ದಾಖಲೆಗಳನ್ನು ಮಾತ್ರ ಪರಿಶೀಲಿಸಲಾಗುವುದೆಂದು ಭರವಸೆ ನೀಡಿದರು. ಇದಕ್ಕೆ ತಗಲುವ ಶುಲ್ಕವನ್ನು ಖಾಸಗಿ ಆಡಳಿತ ಮಂಡಳಿಗಳು ಪಾವತಿಸಲು ಸಿದ್ಧರಿರಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ಸರ್ಕಾರಿ ಪಪೂ ಕಾಲೇಜು ಮತ್ತು ಅನುದಾನ ಪಪೂ ಕಾಲೇಜಿನಲ್ಲಿ ಚಾಲ್ತಿಯಲ್ಲಿರುವಂತೆ ಒಬ್ಬ ವಿದ್ಯಾರ್ಥಿ ಕಾಲೇಜನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದರೆ ಅಂತಹ ವಿದ್ಯಾರ್ಥಿ ಪಾವತಿ ಮಾಡಿರುವ ಶುಲ್ಕವನ್ನು ಹಿಂತಿರುಗಿಸುವ ಅವಕಾಶಗಳು ಇರುವುದಿಲ್ಲ. ಇದನ್ನು ಖಾಸಗಿ ಪಪೂ ಕಾಲೇಜಿಗೂ ಅನ್ವಯವಾಗುವಂತೆ ಸುತ್ತೋಲೆ ಹೊರಡಿಸಬೇಕೆಂದೂ ಕನಿಷ್ಠ ಪಕ್ಷ ಹಿಂತಿರುಗಿಸುವಂತೆ ಸುತ್ತೋಲೆ ಹೊರಡಿಸದಂತೆ ಕಪ್ಮಾದ ವತಿಯಿಂದ ವಿನಂತಿಸಲಾಯಿತು.

ಸರಕಾರದ ಶೈಕ್ಷಣಿಕ ನೀತಿ ನಿರೂಪಣೆಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಾರಿಗೊಳಿಸುವ ಮೊದಲು ಕುಪ್ಮಾದ ಅನುಭವ, ಸಲಹೆಗಳನ್ನು ಪರಿಗಣಿಸಬೇಕು ಎಂದೂ ಈ ಸಭೆಯಲ್ಲಿ ವಿನಂತಿಸಲಾಯಿತು. ಇಲಾಖೆಗಳು ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಯಾವುದೇ ರೀತಿಯ ದೋಷ ಇರಬಾರದು. ಔಟ್ ಆಫ್ ಸಿಲೆಬಸ್ ಇರಬಾರದು. ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಗುಣಮಟ್ಟದಿಂದ ಕೂಡಿರಬೇಕು.

ಮೂರು ಪರೀಕ್ಷೆಗಳ ನಿರ್ಧಾರವನ್ನು ಸರಕಾರ ತಕ್ಷಣ ಕೈಬಿಡಬೇಕು. ಈ ರೀತಿ ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಪರೀಕ್ಷೆಯ ಪಾವಿತ್ರ್ಯತೆ ಉಳಿಸಲು ಅಸಾಧ್ಯ ಅಲ್ಲದೆ ಪರೀಕ್ಷೆ ಗುಣಮಟ್ಟದಿಂದ ಇರಲು ಸಾಧ್ಯವಿಲ್ಲ. ಪರೀಕ್ಷೆ ನಡೆಸಲು, ಮೌಲ್ಯಮಾಪನ ಮಾಡಲು ಸಮಯವನ್ನು ಹೊಂದಿಸುವುದು ಕಷ್ಟಸಾಧ್ಯ ಎಂದು ತಿಳಿಸಲಾಯಿತು.

ಒಂದು ಮುಖ್ಯ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ಮಾತ್ರವೇ ಶಿಕ್ಷಣ ಇಲಾಖೆ ನಡೆಸಬೇಕು. ಪರೀಕ್ಷೆಗೆ ಬೇಕಾಗುವ ಸರಿಯಾದ ಸಿಲೆಬಸ್‌ನ್ನು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಪ್ರಕಟಿಸುವುದು, ಅದರಲ್ಲಿ ಸ್ಪಷ್ಟತೆ ಇರಬೇಕು. ಒಂದು ಪಕ್ಷದಲ್ಲಿ ಎನ್‌ಸಿಇಆರ್‌ಟಿ ಸಿಲೆಬಸ್ ಆಗಿದ್ದರೂ ವಿವರವಾಗಿ ಇಲಾಖೆ ವೈಬ್‌ಸೈಟ್‌ನಲ್ಲಿ ಪ್ರಕಟಿಸಿ ಅದರಂತೆ ಪ್ರಶ್ನೆ ಪತ್ರಿಕೆಯನ್ನು ದೋಷರಹಿತವಾಗಿ ತಯಾರಿಸಲು ಮನವಿ ಮಾಡಲಾಯಿತು.

ಪದವಿ ಪೂರ್ವ ಇಲಾಖೆಯು ಹೊರಡಿಸುವ ಸುತ್ತೋಲೆಗೆ ಸಂಬಂಧ ಪಟ್ಟಂತೆ ಸ್ಟಾಟ್ ಪೋರ್ಟಲ್‌ನಲ್ಲಿ ಮಾಹಿತಿಯನ್ನು ದಾಖಲೀಕರಣ ಮಾಡಲು ಅವಸರಿಸಬಾರದು. ಕಾಲೇಜುಗಳಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಬೇಕು ಹಾಗೂ ಯಾವುದೇ ಕಾರಣಕ್ಕೂ ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕವನ್ನು ನೀಡಬಾರದು. ಪದವಿ ಪೂರ್ವ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಲಾಯಿತು.

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾಲೇಜುಗಳ ಕಟ್ಟಡಗಳಿಗೆ (ಹಳೆಯ ಕಟ್ಟಡಗಳಿಗೆ) ಸರ್ಕಾರವು ಕಾರ್ಯರೂಪಕ್ಕೆ ತರಲಾಗದ ಯಾವುದೇ ರೀತಿ ಷರತ್ತುಗಳನ್ನು ವಿಧಿಸಬಾರದು. ಆದರೆ ಹೊಸತಾಗಿ ನಿರ್ಮಿಸುವ ಕಟ್ಟಡಗಳಿಗೆ ಸರ್ಕಾರವು ನಿಯಮಗಳನ್ನು ವಿಧಿಸಬಹುದು. ಅಂತೆಯೇ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಥವಾ ಉಪನಿರ್ದೇಶಕರು ಆಯಾ ಜಿಲ್ಲೆಯಲ್ಲಿರುವ ಕಾಲೇಜುಗಳಿಗೆ ಭೇಟಿ ನೀಡಿ ಸುರಕ್ಷತೆಯ ಬಗ್ಗೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ ಸಲಹೆಯನ್ನು ನೀಡಲಾಯಿತು. ಒಂದು ವೇಳೆ ಷರತ್ತುಗಳನ್ನು ವಿಧಿಸಿದಲ್ಲಿ ಅಂತಹ ಷರತ್ತುಗಳನ್ನು ಸರಕಾರಿ ಕಾಲೇಜುಗಳಿಗೂ ಅನ್ವಯಿಸುವಂತೆ ಒತ್ತಾಯಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಆರಂಭ, ಮುಕ್ತಾಯದ ಬಗ್ಗೆ ಕ್ಯಾಲೆಂಡರ್ ಆಫ಼್ ಈವೆಂಟ್ಸ್‌ನ್ನು (ವರ್ಷದ ಯೋಜನೆ) ಸಾಕಷ್ಟು ಮುಂಚಿತವಾಗಿ ತಯಾರಿಸುವುದು ಅಂತೆಯೇ ಅದನ್ನು ಅಂತಿಮಗೊಳಿಸುವ ಮೊದಲು ಕುಪ್ಮಾ ಸಂಸ್ಥೆಯೊಂದಿಗೆ ಚರ್ಚಿಸಿ ಸೂಕ್ತವಾದ ಸಲಹೆಗಳನ್ನು ಸ್ವೀಕರಿಸಿ ಕೊನೆಗೆ ಅಂತಿಮಗೊಳಿಸಿ ಬಿಡುಗಡೆಗೊಳಿಸಬೇಕೆಂದು ತಿಳಿಸಲಾಯಿತು. 

ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷಾ ವೇಳಾಪಟ್ಟಿಯನ್ನು ತಯಾರಿಸುವಾಗ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಸಿಇಟಿ, ವಾರ್ಷಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಹೀಗೆ ಮುಂತಾದ ಪರೀಕ್ಷೆಗಳ ದಿನಾಂಕಗಳನ್ನು ನಿಗದಿ ಪಡಿಸುವ ಮೊದಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಪ್ಮಾ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡರೆ ಉತ್ತಮ ಎಂಬ ಮನವಿಯನ್ನು ಮುಂದಿಡಲಾಯಿತು. 

ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಕಾಲೇಜುಗಳ ಆಡಳಿತ ಮಂಡಳಿಗಳು ಹೆಚ್ಚುವರಿ ವಿಭಾಗಕ್ಕಾಗಿ ಶುಲ್ಕವನ್ನು ಪಾವತಿಸುತ್ತಾರೆ. ಆ ಸಂದರ್ಭದಲ್ಲಿ ಒಂದು ವೇಳೆ ಹೆಚ್ಚುವರಿ ಶುಲ್ಕವನ್ನು ಪಾವತಿಸಿದಲ್ಲಿ ಆ ಮೊತ್ತವನ್ನು ಶಿಕ್ಷಣ ಸಂಸ್ಥೆಗೆ ಹಿಂತಿರುಗಿಸುವ ವ್ಯವಸ್ಥೆಯನ್ನು ಮಾಡುವುದು.

ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷಗಳಲ್ಲಿ ಬೇರೆ ಬೇರೆ ಆಡಳಿತ ಮಂಡಳಿಗಳು ಹೊಸ ಕಾಲೇಜು, ಹೆಚ್ಚುವರಿ ವಿಭಾಗಕ್ಕಾಗಿ ಅಥವಾ ಹೊಸ ವಿಭಾಗಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಸಾಕಷ್ಟು ಮುಂಚಿತವಾಗಿ ಅದನ್ನು ಪರಿಶೀಲಿಸಿ, ಅನುಮತಿಯನ್ನು ನೀಡುವುದು. ಅಂತೆಯೇ ಈ ಸಂಬಂಧವಾಗಿ ಈ ಪ್ರಕ್ರಿಯೆಯನ್ನು ಶೈಕ್ಷಣಿಕ ವರ್ಷದ ಪ್ರಾರಂಭಕ್ಕಿಂತ ಕನಿಷ್ಟ ಎರಡು ತಿಂಗಳು ಮುಂಚಿತವಾಗಿ ಅನುಮತಿಯನ್ನು ನೀಡುವುದರ ಬಗ್ಗೆ ಗಮನ ಹರಿಸಬೇಕೆಂದು ತಿಳಿಸಲಾಯಿತು. ಇದಕ್ಕೆ ಕ್ಯಾಲೆಂಡರ್ ಆಫ್ ಈವೆಂಟ್ಸ್ ಅನ್ನು ರಚಿಸುವುದು ಉತ್ತಮವೆಂದು ತಿಳಿಸಿತು. 

ಭೂಪರಿವರ್ತನೆಯನ್ನು ಶೈಕ್ಷಣಿಕ ಉದ್ದೇಶಕ್ಕೆಂದು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಯಲ್ಲಿಯೂ ಅಳವಡಿಸುವಂತೆ ಕಂದಾಯ ಇಲಾಖೆಗೆ ವಿನಂತಿಸಲಾಗಿದೆ ಎಂದು ಪಿಯು ನಿರ್ದೇಶಕಿ ಸಿಂಧು ಬಿ ರೂಪೇಶ್ ಭರವಸೆ ನೀಡಿದರು. ಕುಪ್ಮ ನೀಡಿದ 15 ಬೇಡಿಕೆಗಳನ್ನು ಈಡೇರಿಸುವರೇ ಸಕಾರಾತ್ಮಕ ಸ್ಪಂದನೆಯನ್ನು ಸಚಿವರು ಮತ್ತು ಇಲಾಖೆ ಅಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ (ಪದವಿ ಪೂರ್ವ) ನಿರ್ದೇಶಕಿ ಸಿಂಧು ರೂಪೇಶ್, ಜಂಟಿ ನಿರ್ದೇಶಕಿ ಶ್ವೇತಾ ಜಿ.ಎನ್. ನೀಡಿದರು. 

ಈ ಸಂದರ್ಭದಲ್ಲಿ ಕುಪ್ಮದ ಅಧ್ಯಕ್ಷ ಡಾ. ಮೋಹನ್ ಆಳ್ವ, ಕಾರ್ಯದರ್ಶಿ ಪ್ರೊ. ನರೇಂದ್ರ ನಾಯಕ್ ಎಲ್, ಗೌರವಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಉಪಾಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಯುವರಾಜ್ ಜೈನ್, ಸದ್ಯಸ ಸುಬ್ರಹ್ಮಣ್ಯ ನಟ್ಟೋಜ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೇಷಾಚಲ, ಬೆಂಗಳೂರಿನ ದಕ್ಷಿಣ ಜಿಲ್ಲಾಧ್ಯಕ್ಷ ಡಾ. ಜಯರಾಮ ಶೆಟ್ಟಿ, ಪದಾಧಿಕಾರಿಗಳಾದ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ದೇವರಾಜ ಬಿ, ದಾವಣಗೆರೆಯ ಜಿಲ್ಲೆಯ ಅಧ್ಯಕ್ಷ ಎಸ್.ಜೆ. ಶ್ರೀಧರ್, ಹಾವೇರಿ ಜಿಲ್ಲೆಯ ಅಧ್ಯಕ್ಷ ಸತೀಶ ಬಾಗಣ್ಣನವರ, ಖಜಾಂಚಿ ರಮೇಶ್ ಕೆ. ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article