ಇಂದು ನುಸುಕಿನ ಜಾವ ಕಳ್ಳತನಕ್ಕೆ ಯತ್ನ
ಮಂಗಳೂರು: ಮಂಗಳೂರಿನಲ್ಲಿ ಚಡ್ಡಿ ಗ್ಯಾಂಗ್ ಕೃತ್ಯ ಮಾಸುವ ಮುನ್ನವೇ ಮಂಗಳೂರಿನ ಎರಡು ಕಡೆಗಳಲ್ಲಿ ಭಾನುವಾರ ನಸುಕಿನ ಜಾವ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಕಾವೂರಿನ ಮಹಾತ್ಮಾಗಾಂಧಿ ಬಡಾವಣೆಯಲ್ಲಿ ಬೆಳಗ್ಗಿನ ಜಾವ ಮನೆಯ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ ನಡೆಸಲಾಗಿದೆ. ನಸುಕಿನ 1.30ರಿಂದ 2 ಗಂಟೆ ಸಮಯ ಮನೆಯ ಕಡೆ ಬಂದ ನಾಲ್ವರ ತಂಡ ಗೇಟಿನ ಬೀಗ ಮುರಿದು ರಾಡಿನಿಂದ ಮನೆಯ ಮುಂಬಾಗಿಲ ಬೀಗ ಮುರಿಯಲು ಯತ್ನಿಸಿದೆ. ಆಗ ಮನೆ ಮಂದಿ ಎಚ್ಚರಗೊಂಡು ಬೊಬ್ಬೆ ಹಾಕಿದ್ದು ಕಳ್ಳರು ಓಡಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ.
ಪದವಿನಂಗಡಿಯ ಪೆರ್ಲಗುರಿ ಎಂಬಲ್ಲಿ ಪ್ರಸನ್ನ ಗಣಪತಿ ದೇವಸ್ಥಾನ ಬಳಿ ನಸುಕಿನ 2ರಿಂದ 3 ಗಂಟೆ ಅವಧಿಯಲ್ಲಿ ಕಳ್ಳರ ತಂಡ ಕಳವಿಗೆ ಯತ್ನ ನಡೆಸಿದ ಬಗ್ಗೆ ಹೇಳಲಾಗಿದೆ. ದೇವಸ್ಥಾನ ಸಮೀಪದ ಮನೆಗಳತ್ತ ಟಾರ್ಚ್‌ಲೈಟ್ ಹಾಕುತ್ತಿದ್ದಾಗ ಮನೆ ಮಂದಿ ಎಚ್ಚರಗೊಂಡು ಹೊರಗೆ ಬಂದು ಕೂಗಿದ್ದಾರೆ. ಆಗ ಕಳ್ಳರು ಕಾಲ್ಕಿತ್ತಿದ್ದಾರೆ. ಕಳ್ಳರು ಪರಾರಿಯಾಗಿರುವುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಈ ಬಗ್ಗೆಯೂ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.