ಫಲ್ಗುಣಿ ತುಂಬಿದರೆ ಈ ಗ್ರಾಮಕ್ಕೆ ಮುಳುಗಡೆಯ ಭೀತಿ: ಜಿಲ್ಲಾಧಿಕಾರಿಗಳು ಭೇಟಿ
Saturday, July 20, 2024
ಮಂಗಳೂರು: ಫಲ್ಗುಣಿ ನದಿ ತುಂಬಿದರೆ ಪ್ರತಿ ಬಾರಿ ಈ ಗ್ರಾಮಕ್ಕೆ ಮಾತ್ರ ಮುಳುಗಡೆಯ ಭೀತಿ. ಮಂಗಳೂರು ಹೊರವಲಯದ ಮರವೂರು ಬಳಿಯ ಅದ್ಯಪಾಡಿ ಗ್ರಾಮದ ಮುಗೇರಕುದ್ರು ಕಳೆದ ಹನ್ನೊಂದು ವರ್ಷಗಳಿಂದಲೂ ಪ್ರತಿವರ್ಷ ಮುಳುಗುತ್ತಲೇ ಇದೆ. 2019ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಈ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರು. ಈಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿರುವ ಮುಲ್ಲೈ ಮುಗಿಲನ್, ಅದ್ಯಪಾಡಿಗೆ ಬಂದು ದೋಣಿಯಲ್ಲಿ ಸಂತ್ರಸ್ತರ ಮನೆಗಳಿಗೆ ತೆರಳಿದ್ದು ನಿವಾಸಿಗಳ ಕಷ್ಟವನ್ನು ಸ್ವತಃ ನೋಡಿ ಮರುಗಿದ್ದಾರೆ.
ಮುಗೇರಕುದ್ರು ಪ್ರದೇಶದಲ್ಲಿ 35 ಮನೆಗಳಿದ್ದು, ಸುಮಾರು ನೂರಕ್ಕೂ ಹೆಚ್ಚು ಜನರಿದ್ದಾರೆ. ಕಳೆದ ಒಂದು ವಾರದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಫಲ್ಗುಣಿ ನದಿ ತುಂಬಿ ಹರಿದಿದ್ದು, ಅದ್ಯಪಾಡಿ ಗ್ರಾಮದ ಹಲವು ಕಡೆ ಕೃಷಿ ಜಮೀನು, ಮನೆಗಳು ಅರ್ಧಕ್ಕೆ ಮುಳುಗಿಬಿಟ್ಟಿವೆ. ನಾಲ್ಕು ದಿನಗಳಿಂದ ನೆರೆ ನೀರು ಒಂದೇ ಸಮನೆ ಮನೆಗಳಿಗೆ ನುಗ್ಗುತ್ತಿದ್ದು, ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಲಿನ ನಿವಾಸಿಗಳು ಮನೆಯ ಅಂಗಳ ದಾಟುವುದಕ್ಕೂ ಅತ್ತಿತ್ತ ಹೋಗುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಶಾಲೆಗೆ ಹೋಗುವುದಕ್ಕೂ,ಹೊರಗೆ ಹೋಗುವುದಕ್ಕೂ ದೋಣಿಗಳನ್ನು ಆಶ್ರಯಿಸುತ್ತಿದ್ದಾರೆ.