ಜಿಲ್ಲೆಗೆ ಸಂಪರ್ಕಿಸುವ ಪ್ರಮುಖ ಘಾಟ್ಗಲಳ ಬಂದ್: ಜಿಲ್ಲಾಡಳಿತದ ಪೂರ್ವ ಸಿದ್ಧತೆಯ ಕೊರತೆ
ಮಂಗಳೂರು: ಮಂಗಳೂರು-ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಮೂರು ಘಾಟ್‌ಗಳಾದ ಶಿರಾಡಿ, ಚಾರ್ಮಾಡಿ ಹಾಗೂ ಮಡಿಕೇರಿ ಘಾಟ್‌ಗಳನ್ನು ಬಂದ್ ಮಾಡುವುದರಲ್ಲಿ ಜಿಲ್ಲಾಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಕಂಡುಬಂದಿದೆ. ಕಳೆದ ರಾತ್ರಿ ಮಡಿಕೇರಿ ಘಾಟ್‌ನಲ್ಲಿ ನೂರಾರು ಜನರು ಅತಂತ್ರರಾಗಿದ್ದರು. ಇದು ಉಭಯ ಜಿಲ್ಲೆಗಳ ಜಿಲ್ಲಾಡಳಿತದ ಪೂರ್ವ ಸಿದ್ಧತೆಯ ಕೊರತೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಈ ಬಗ್ಗೆ ಶುಕ್ರವಾರ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅವರಿಗೆ ಸೂಕ್ತ ಸೂಚನೆಯನ್ನು ನೀಡಿದ್ದಾರೆ.
ಮಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿ ಪೂರ್ವ ಸಿದ್ಧತೆಯೊಂದಿಗೆ ಘಾಟ್ ಬಂದ್ ಬಗ್ಗೆ ಚಿಂತಿಸಬೇಕು. ಒಂದೊಂದು ಜಿಲ್ಲೆ ತೀರ್ಮಾನ ತೆಗೆದುಕೊಂಡರೆ ಜನರಿಗೆ ಸಮಸ್ಯೆ ಯಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾತ್ರಿ ೮ರಿಂದ ಬೆಳಗ್ಗೆ ೬ರ ತನಕ ರಸ್ತೆ ನಿರ್ಬಂಧ ಮಾಡಬೇಕು. ಲೋಕೋಪಯೋಗಿ ಇಲಾಖೆ ರಸ್ತೆ ಸುರಕ್ಷತೆಗೆ ಪ್ರಾಮುಖ್ಯತೆ ಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೆಲ್ವಕುಮಾರ್ ಅವರಿಗೆ ಸೂಚಿಸಿದ್ದಾರೆ.
ದಿನನಿತ್ಯ ಸಹಸ್ರಾರು ಮಂದಿ ಮಂಗಳೂರು-ಬೆಂಗಳೂರು ಪ್ರಯಾಣಿಸುತ್ತಾರೆ. ಪ್ರಯಾಣಿಕರು ಬಸ್, ಕಾರುಗಳನ್ನು ಆಶ್ರಯಿಸುತ್ತಾರೆ. ನಿತ್ಯ ಬಳಕೆಯ ವಸ್ತುಗಳ ಟ್ರಕ್‌ಗಳೂ ಸಂಚರಿಸುತ್ತವೆ. ಆದರೆ ಈ ಪ್ರಮುಖ ಮೂರೂ ಘಾಟ್ ರಸ್ತೆಗಳನ್ನು ಬಂದ್ ಮಾಡಿದರೆ ಜನರು ಪರದಾಟ ನಡೆಸಬೇಕಾಗುತ್ತದೆ. ವಿಮಾನ ಸಂಚಾರ ಜನಸಾಮಾನ್ಯರ ಕೈಗೆಟಕದು. ರೈಲು ಸಂಚಾರ ತುರ್ತು ಸಂದರ್ಭಗಳಿಗೆ ಅನುಗುಣವಾಗಿಲ್ಲ. ಈ ನಿಟ್ಟಿನಲ್ಲಿ ರಸ್ತೆ ಸಂಚಾರ ಅನಿವಾರ್ಯ ವಾಗಿರುತ್ತದೆ. ಮಡಿಕೇರಿ ಘಾಟ್‌ನಲ್ಲಿ ಆಗಿರುವಂತಹ ಸಮಸ್ಯೆ ಮರುಕಳಿಸದಂತೆ ವ್ಯವಸ್ಥೆ ಮಾಡಬೇಕಾದುದು ನಾಲ್ಕೂ ಜಿಲ್ಲಾಧಿಕಾರಿಗಳ ಹಾಗೂ ಲೋಕೋಪಯೋಗಿ ಇಲಾಖೆಯ ಕರ್ತವ್ಯವಾಗಿದೆ ಎಂದಿದ್ದಾರೆ.
ಸ್ಪಂದನೆ..
ಕಳೆದೆರಡು ವಾರಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ರಸ್ತೆ ಕುಸಿತ ಇತ್ಯಾದಿಗಳಿಂದಾಗಿ ನಡೆಯುವ ಸಂಭಾವ್ಯ ಅಪಾಯ ತಪ್ಪಿಸಲು ಚಾರ್ಮಾಡಿ, ಶಿರಾಡಿ ಹಾಗು ಮಡಿಕೇರಿ ಘಾಟ್ಗಳಲ್ಲಿ ವಾಹನಗಳ ಸಂಚಾರಕ್ಕೆ ಆಯಾ ಜಿಲ್ಲಾಡಳಿತ ಗುರುವಾರ ನಿರ್ಬಂಧ ವಿಧಿಸಿದ್ದವು. ಯಾವುದೇ ಮುನ್ಸೂಚನೆ ಇಲ್ಲದೆ ಹೀಗೆ ಬೆಂಗಳೂರು, ಮೈಸೂರಿಗೆ ಸಂಪರ್ಕ ಕಲ್ಪಿಸುವ ಘಾಟ್ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹಾಕಿದ್ದರಿಂದ ಜನರಿಗೆ ತೀವ್ರ ತೊಂದರೆಯಾಗಿತ್ತು. ಮಡಿಕೇರಿ ಘಾಟ್ ರಸ್ತೆ ಬಂದ್ ಮಾಡಿದ್ದರಿಂದ ರಸ್ತೆಯ ಎರಡೂ ಕಡೆಗಳಲ್ಲಿ ನೂರಾರು ಜನ ವಾಹನಗಳಲ್ಲಿ ಸಿಲುಕಿ ಬಿಟ್ಟರು. ಮಧ್ಯರಾತ್ರಿ ಸ್ಪೀಕರ್ ಖಾದರ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗು ಕೊಡಗು ಎಸ್ಪಿಗೆ ಮಾತನಾಡಿ ಪೊಲೀಸ್ ಹೈವೇ ಪ್ಯಾಟ್ರೋಲ್ ವಾಹನಗಳ ನಿಗಾದಲ್ಲಿ ಜನರಿಗೆ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು.