`ಮನ್ಸ' ಸಮಾಜ ಪರಿಶಿಷ್ಟ ಪಟ್ಟಿಯಲ್ಲಿ ಪ್ರತ್ಯೇಕ ನಮೂದಿಸಲು ಬಿ.ಕೆ. ಹರಿಪ್ರಸಾದ್ ಆಗ್ರಹ
ಮಂಗಳೂರು: ಕರಾವಳಿ ಭಾಗದ ನಿರ್ಲಕ್ಷಿತ ‘ಮನ್ಸ’ ಸಮಾಜವನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ವಿಷಯ ಪ್ರಸ್ತಾಪಿಸಿದರು. ರಾಜ್ಯದ ಕರಾವಳಿ ಭಾಗದಲ್ಲಿರುವ ‘ಮನ್ಸ’ ಸಮಾಜವು ಅತ್ಯಂತ ಆರ್ಥಿಕ ದುಸ್ಥಿತಿಯಲ್ಲಿರುವ, ಸಮಾಜದ ಕಟ್ಟ ಕಡೆಯ ನಿರ್ಲಕ್ಷ್ಯಕ್ಕೊಳಪಟ್ಟ ಸಮಾಜವಾಗಿದ್ದು, ತಮ್ಮ ಪೂರ್ವಿಕರಾಧಿಯಾಗಿ ಜೀತಪದ್ಧತಿಯಲ್ಲಿ ನೊಂದು ಬೆಂದವರಾಗಿದ್ದಾರೆ. ವ್ಯವಸಾಯ ಮಾಡುವುದಕ್ಕೆ ಕೀಳು ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ನಿಷೇಧಕ್ಕೆ ಒಳಗಾಗಿದ್ದರು. ಗೇಣು ಭೂಮಿಯು ಇಲ್ಲದ, ಅತ್ಯಂತ ಬಡತನದ, ಹಸಿವನ್ನು ನುಂಗಿದ, ದುಡಿದ ಕೂಲಿಗೆ ಕಾಸೂ ಇಲ್ಲದ ಅತ್ಯಂತ ನಿಕೃಷ್ಟವಾಗಿ ಕಾಣಲ್ಪಟ್ಟ ಸಮಾಜ ಇವರದ್ದಾಗಿದೆ. ಈ ಸಮಾಜ ಅನುಭವಿಸುವ ಕಷ್ಟ ಮತ್ತು ನೋವುಗಳ ಸಂಪೂರ್ಣ ಚಿತ್ರಣವನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಕೆ. ಶಿವರಾಮ ಕಾರಂತರವರು ತಮ್ಮ ಚೋಮನದುಡಿ ಕಾದಂಬರಿಯಲ್ಲಿ ಮನಮುಟ್ಟುವಂತೆ ವರ್ಣಿಸಿದ್ದಾರೆ.
ಸಮಾಜದ ಕೆಳಸ್ತರದಲ್ಲಿರುವ ಮನ್ಸರು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅವಕಾಶ ವಂಚಿತ ರಾಗಿದ್ದಾರೆ. ಇಂತಹ ನಿರ್ಲಕ್ಷಿತ ಸಮಾಜವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದ್ದು, ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಸರಕಾರ ಮುಂದಾಗಬೇಕಿದೆ ಎಂದು ಗಮನ ಸರಕಾರದ ಸೆಳೆದರು.
‘ಮನ್ಸ’ ಸಮಾಜದವರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ‘ಮನ್ಸ’ ಎಂಬ ಉಪಜಾತಿಯ ಕೆಳಗೆ ಪ್ರತ್ಯೇಕವಾಗಿ ನಮೂದಿ ಸಬೇಕೆಂದು ಮತ್ತು ಈ ಸಂಬಂಧ ತಿದ್ದುಪಡಿ ಆದೇಶ ಹೊರಡಿಸಲು ಕ್ರಮಕೊಳ್ಳುವಂತೆ ಒತ್ತಾಯಿಸಿದರು.