Mangalore: ಪರಾರಿಯಾಗಲೆತ್ನಿಸಿದ ಚಡ್ಡಿಗ್ಯಾಂಗ್‌ಗೆ ಗುಂಡೇಟು
ಮಂಗಳೂರು: ನಗರದ ಕೋಟೆಕಣಿಯಲ್ಲಿ ನಡೆದ ದರೋಡೆ ಕೃತ್ಯದಲ್ಲಿ ಭಾಗಿಯಾಗಿ ಬಂಧಿತರಾದ ಚಡ್ಡಿಗ್ಯಾಂಗ್‌ನ್ನು ಸ್ಥಳ ಮಹಜರು ನಡೆಸಲು ಕರೆದೊಯ್ಯುತ್ತಿದ್ದ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭ ಪೊಲೀಸರು ಮುಂಜಾಗೃತಾ ಕ್ರಮವಾಗಿ ಓಡಲೆತ್ನಿಸಿದ ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ ಘಟನೆ ನಗರಕ್ಕೆ ಹೊರವಲಯದ ಪಡುಪಣಂಬೂರು ಬಳಿ ಇಂದು ಬೆಳಿಗ್ಗೆ ನಡೆದಿದೆ.
ದರೋಡೆ ಆರೋಪಿಗಳನ್ನು ನಿನ್ನೆ ಸಕಲೇಶಪುರದಿಂದ ಬಂಧಿಸಿ ತರಲಾಗಿತ್ತು. ಬುಧವಾರ ಬೆಳಗ್ಗೆ ಸ್ಥಳ ಮಹಜರು ವೇಳೆ ಎಎಸ್ ಐ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ದರೋಡೆ ಕೋರರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿದೆ. ಗುಂಡು ಹಾರಿಸಿದ ಪರಿಣಾಮ ಇಬ್ಬರು ದರೋಡೆಕೋರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ಪೊಲೀಸರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಘಟನೆ ವೇಳೆ ಎಎಸ್‌ಐ ವಿನಾಯಕ್ ಹಾಗೂ ಸಿಬ್ಬಂದಿ ಶರತ್ ಗಾಯಗೊಂಡಿದ್ದರೆ, ದರೋಡೆಕೋರರಾದ ರಾಜು ಸಿಂಗ್ವಾನಿಯಾನ ಎಡ ತೊಡೆಗೆ ಹಾಗೂ ಹಾಗೂ ಇನ್ನೋರ್ವ ಆರೋಪಿ ಬಾಲಿ ಎಂಬಾತನ ಬಲ ಕಾಲಿಗೆ ಗುಂಡೇಟು ತಗಲಿದ್ದು, ಅವರಿಬ್ಬರನ್ನು ವೆನ್ಲಾಕ್ ಆಸ್ಪತ್ರೆಗೆ ಹಾಗೂ ಗಾಯಗೊಂಡ ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ದರೋಡೆ ನಡೆಸಿ ಸಿಕ್ಕಿ ಬಿದ್ದಿರುವ ಮಧ್ಯ ಪ್ರದೇಶ ಮೂಲದ ಚಡ್ಡಿ ಗ್ಯಾಂಗ್ ಬೆಂಗಳೂರಿನಿಂದ ಮಂಗಳೂರಿಗೆ ಬಂದಿತ್ತು. ದರೋಡೆ ನಡೆಸಿದ ಬಳಿಕ ಬೆಂಗಳೂರಿನ ಯಶವಂತ ಪುರಕ್ಕೆ ವಾಪಸಾಗುತ್ತಿತ್ತು. ಇದೇ ಚಡ್ಡಿಗ್ಯಾಂಗ್ ಬೆಂಗಳೂರು, ರಾಜಸ್ತಾನ, ಮಧ್ಯ ಪ್ರದೇಶಗಳಲ್ಲಿಯೂ ಹಲವಾರು ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ಓರ್ವ ಆರೋಪಿ ರಾಜು ಮೇಲೆ ಹತ್ತು ಪ್ರಕರಣಗಳಿವೆ. ಇದು ವೃತ್ತಿಪರ ದರೋಡೆಕೋರರ ಗ್ಯಾಂಗ್. ಮಂಗಳೂರಿನ ಕೋಡಿಕಲ್‌ನಲ್ಲಿ ಕೂಡ ಇದೇ ಗ್ಯಾಂಗ್ ಕಳ್ಳತನ ನಡೆಸಿದೆ. ಬೆರಳಚ್ಚು ಪರಿಶೀಲನೆ ಮೂಲಕ ದೇಶದಾದ್ಯಂತ ಈ ತಂಡ ನಡೆಸಿರಬಹುದಾದ ಕೃತ್ಯಗಳ ಮಾಹಿತಿ ಪಡೆದುಕೊಳ್ಳಲಾಗುವುದು. ದರೋಡೆಕೋರರನ್ನು ಬಂಧಿಸಿದ ಎಸ್‌ಐ ಭಾರತಿ ನೇತೃತ್ವದ ತಂಡಕ್ಕೆ 50 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ.
ಕೋಟೆಕಣಿಯಲ್ಲಿ ವೃದ್ಧ ದಂಪತಿಗಳಿದ್ದ ಮನೆಯಲ್ಲಿ ದರೋಡೆ ಮಾಡಿ ಬೆಂಗಳೂರಿನತ್ತ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಡ್ಡಿಗ್ಯಾಂಗ್‌ನ್ನು ಮಂಗಳೂರು ಪೊಲೀಸರು ಹಾಸನದ ಪೊಲೀಸರ ಸಹಕಾರದಿಂದ ಸಕಲೇಶಪುರದಲ್ಲಿ ಮಂಗಳವಾರ ಬಂಧಿಸಿದ್ದರು.
ಮಧ್ಯಪ್ರದೇಶದ ಗುನಾ ಜಿಲ್ಲೆಯ ರಾಜು ಸಿಂಘಾನಿಯ (24), ಭೊಪಾಲ್‌ನ ಮಯೂರ್ (30), ಬಾಲಿ (22), ಗುಣಾ ಜಿಲ್ಲೆಯ ವಿಕ್ಕಿ (21) ಬಂಧಿತರು.