.jpeg)
Udupi: ಮಳೆ ಹಾನಿಯ ನಷ್ಟವನ್ನು ಶೀಘ್ರ ನೀಡುವಂತೆ ಮಂಜುನಾಥ ಭಂಡಾರಿ ಸೂಚನೆ
Wednesday, July 10, 2024
ಉಡುಪಿ: ಜು.10 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಮಂಜುನಾಥ ಭಂಡಾರಿ ಅವರು ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಭವಿಸಿದ ಪ್ರಾಣ ಹಾನಿ, ಮನೆ, ಕಟ್ಟಡ, ಇತರ ಆಸ್ತಿಗಳ, ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿಯನ್ನು ಆದಷ್ಟು ಶೀಘ್ರವಾಗಿ ಪರಿಣತ ಅಧಿಕಾರಿಗಳ ಮೂಲಕ ಪರಿಶೀಲಿಸಿ ನಷ್ಟವನ್ನು ಸರಿಯಾಗಿ ಅಂದಾಜು ಮಾಡಿ ಅತಿ ಕನಿಷ್ಟ ದಾಖಲೆ ಸಂಗ್ರಹಿಸಿ ಜಿಲ್ಲಾಧಿಕಾರಿಗಳ (ವೈಯಕ್ತಿಕ ಠೇವಣಿ) ಪಿಡಿ ಖಾತೆಯಿಂದ ನೀಡಬಹುದಾದ ಗರಿಷ್ಟ ಪರಿಹಾರಧನವನ್ನು ತಕ್ಷಣ ನೀಡುವ ಕುರಿತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಉಡುಪಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಯಾಲ್ ಇವರೊಂದಿಗೆ ಚರ್ಚಿಸಿದರು.
ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಮಳೆ ಹಾನಿಯ ಕುರಿತು ಕೆಲವು ದಾಖಲೆಗಳನ್ನು ಒದಗಿಸುವುದಾಗಿ ಹೇಳಿದ್ದು ಅವುಗಳ ಬಗ್ಗೆ ಬೆಂಗಳೂರಿನಲ್ಲಿ ಸರ್ಕಾರದ ವಿವಿಧ ಸಚಿವರು ಹಾಗೂ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಪುತ್ರನ್ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರುಗಳು ಉಸ್ಥಿತರಿದ್ದರು.