Mangalore: ದೇಶದಲ್ಲಿ ತುರ್ತು ಪರಿಸ್ಥಿತಿ: ಜಿಲ್ಲೆಯ ಸಾಮಾನ್ಯರಿಗೆ ಯಾವುದೇ ತೊಂದರೆ ಆಗಿಲ್ಲ-ಬಿಜೆಪಿಯಿಂದ ಕಾಂಗ್ರೆಸ್ ಮೇಲೆ ವೃಥಾ ಆರೋಪ: ಮಾಜಿ ಸಚಿವ ರಮಾನಾಥ ರೈ
ಮಂಗಳೂರು: ದೇಶದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರೂ ದ.ಕ.ಜಿಲ್ಲೆಯಲ್ಲಿ ಸಾಮಾನ್ಯರಿಗೆ ಯಾವುದೇ ತೊಂದರೆ ಆಗಿಲ್ಲ, ಆದರೆ ಬಿಜೆಪಿಗರು ತುರ್ತು ಪರಿಸ್ಥಿತಿ ವಿರುದ್ಧ ಕಾಂಗ್ರೆಸ್ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಹಾಗೂ ಸೈನ್ಯ ಸರ್ಕಾರದ ವಿರುದ್ಧ ಬಂಡೇಳುವ ಸನ್ನಿವೇಶದಲ್ಲಿ ಇಂದಿರಾ ಗಾಂಧಿ ಪ್ರಜಾಪ್ರಭುತ್ವ ಉಳಿವಿಗಾಗಿ ತುರ್ತು ಪರಿಸ್ಥಿತಿ ಘೋಷಿಸಿದರು. ಆದರೆ ಅದೇ ವೇಳೆ ಭೂಮಸೂದೆಯನ್ನೂ ಜಾರಿಗೆ ತಂದಿದ್ದಾರೆ. ಬ್ಯಾಂಕ್ ಹಾಗೂ ಬಸ್‌ಗಳ ರಾಷ್ಟ್ರೀಕರಣ ಮಾಡಿದ್ದಾರೆ. ಋಣ ಪರಿಹಾರ ಕಾಯ್ದೆಯಡಿ ಬಡವರಿಗೆ ಪರಿಹಾರ ಒದಗಿಸಿದ್ದಾರೆ. ಇಷ್ಟೆಲ್ಲ ಸುಧಾರಣೆಗಳು ಜನಸಾಮಾನ್ಯರಿಗೆ ಅನುಕೂಲವಾಗಿದೆ. ಇದರ ಹೊರತು ತುರ್ತು ಪರಿಸ್ಥಿಯಿಂದ ದ.ಕ.ಜಿಲ್ಲೆಯಲ್ಲಿ ಯಾರಿಗೂ ಏನೂ ಆಗಿಲ್ಲ ಎಂದು ಸಮರ್ಥಿಸಿಕೊಂಡರು.
ಈ ಎಲ್ಲ ಸುಧಾರಣಾ ಕ್ರಮಗಳಿಂದಾಗಿ ಈಗಲೂ ಜನಸಾಮಾನ್ಯರಿಗೆ ಕಾಂಗ್ರೆಸ್ ಮೇಲೆ ಹೆಚ್ಚು ಪ್ರೀತಿ ಇದೆ. ಇದನ್ನು ಸಹಿಸದ ಬಿಜೆಪಿಗರು ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ. ಬಡವರಿಗೆ ಶ್ರೀಮಂತರ ಕುಮ್ಕಿ ಜಾಗದ ಹಕ್ಕು ನೀಡಿದೆ. ಇಂದಿರಾ ಗಾಂಧಿ ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದು, ಬಳಿಕ ರಾಜೀವ್‌ಗಾಂಧಿ ಮತ್ತಿತರರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದನ್ನು ನೆನಪಿಸದೆ ಬಿಜೆಪಿಗರು ತುರ್ತು ಪರಿಸ್ಥಿತಿ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಹಿಂದುಗಳ ಬಗ್ಗೆ ಸರಿಯಾದ ಮಾತನ್ನೇ ಹೇಳಿದ್ದಾರೆ. ಇದನ್ನೇ ಶಂಕರಾಚಾರ್ಯರೂ ಸಮರ್ಥಿಸಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಯನ್ನು ಸರಿಯಾಗಿ ಅರ್ಥೈಸದೆ, ವಿನಾ ಕಾರಣ ಬಿಜೆಪಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ ಮಾತು ಕಲಾಪದ ಕಡತದಲ್ಲೂ ದಾಖಲಾಗಿದೆ. ಹಾಗಾಗಿ ಬಿಜೆಪಿಯ ಆರೋಪಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಸೂಕ್ತವಾಗಿ ಉತ್ತರಿಸಬೇಕು ಎಂದರು.
ರಾಜ್ಯ ಸರ್ಕಾರ ಕುಮ್ತಿ ಹಕ್ಕಿನ ಜಮೀನನ್ನು ಲೀಸ್ಗೆ ನೀಡಲು ಆದೇಶ ಹೊರಡಿಸಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ವಾಸ್ತವದಲ್ಲಿ ಕುಮ್ಕಿ ಜಾಗದಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು ಮುಂತಾದ ಬೆಳೆಗಳನ್ನು ಬೆಳೆಸಿದವರು ಆ ಜಮೀನನ್ನು ಲೀಸ್ಗೆ ನೀಡುವ ಬಗ್ಗೆ ಸರ್ಕಾರ ಹೊರಡಿಸಿದ ಆದೇಶ ಎಂದು ನಾನು ಅರ್ಥೈಸಿದ್ದೇನೆ. ಇದರ ಹೊರತು ಬಿಜೆಪಿಗರು ಹೇಳುವಂತೆ ಕೃಷಿಗೆ ಬೇಕಾಗುವ ಸೊಪ್ಪು ಮತ್ತಿತರ ಸೊತ್ತು ಹೊಂದಿರುವ ರೈತರ ಕುಮ್ಕಿ ಜಮೀನನ್ನು ಲೀಸ್‌ಗೆ ಕೊಡುವ ಕುರಿತ ಆದೇಶ ಅದಲ್ಲ ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಅಪ್ಪಿ, ಚಿತ್ತರಂಜನ್ ಶೆಟ್ಟಿ, ಜಯಶೀಲ ಅಡ್ಯಂತಾಯ, ಸುರೇಂದ್ರ ಕಂಬಳಿ, ಚೇತನ್, ಯೋಗೀಶ್ ನಾಯ್ಕ್, ಬೇಬಿ ಕುಂದರ್, ನಿಯಾಸ್ ರಾಡ್ರಿಗಸ್, ನಿತ್ಯಾನಂದ ಶೆಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.