ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ನಮ್ಮ ಬದುಕಿಗೆ ಹೊಸ ಹುರುಪು ನೀಡುತ್ತದೆ: ಅನುರಾಧಾ

ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ನಮ್ಮ ಬದುಕಿಗೆ ಹೊಸ ಹುರುಪು ನೀಡುತ್ತದೆ: ಅನುರಾಧಾ


ಮಂಗಳೂರು: ರಾಷ್ಟ್ರದ ಪ್ರಯೋಜನಕ್ಕಾಗಿ ಮಾಡುವ ತ್ಯಾಗದಿಂದ ಸಿಗುವ ಧನ್ಯತಾ ಭಾವ ನಮ್ಮ ಬದುಕಿಗೆ ಹೊಸ ಹುರುಪು ನೀಡುತ್ತದೆ ಎಂದು ಹುತಾತ್ಮ ಕ್ಯಾ| ಎಂ.ವಿ.ಪ್ರಾಂಜಲ್ ಅವರ ತಾಯಿ ಅನುರಾಧಾ ಅವರು ಹೇಳಿದ್ದಾರೆ.

ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ವತಿಯಿಂದ ಕಾರ್ಗಿಲ್ ವಿಜಯ ದಿವಸ್‌ನ 25ನೇ ವರ್ಷಾಚರಣೆ ಅಂಗವಾಗಿ ರವಿವಾರ ಕದ್ರಿ ಯುದ್ಧ ಸ್ಮಾರಕದಲ್ಲಿ ಜರಗಿದ  ‘ಅಮರ್ ಜವಾನ್ ಜ್ಯೋತಿ ಮೆರವಣಿಗೆ’ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಯುದ್ಧವೇ ಇಲ್ಲದ ಸ್ಥಿತಿ ಅದ್ಭುತ. ಆದರೆ ಅದು ತುಂಬಾ ಅಪರೂಪ. ನಮಗೆ ಸ್ವಾತಂತ್ರ್ಯ ದೊರೆತ ಬಳಿಕವೂ ಹಲವು ಯುದ್ಧಗಳಿಂದ  ಜರ್ಜರಿತರಾಗಿದ್ದೇವೆ.  ಪರೋಕ್ಷವಾದ ಯುದ್ಧಗಳು ಕೂಡ ಸವಾಲೆಸೆದಿವೆ. ಅದಕ್ಕೆ ನಮ್ಮ ಸರಕಾರ, ಸೈನಿಕರು, ಸೈನಿಕರ ಕುಟುಂಬಗಳು ಬೆಲೆ ತೆರುತ್ತಾ ಇವೆ. ತಮ್ಮವರನ್ನು ದೇಶಕ್ಕಾಗಿ  ಅರ್ಪಿಸಿದ ಕುಟುಂಬಗಳ ತ್ಯಾಗದ ಬೆಲೆಯನ್ನು ಬೇರೆಯವರು ಊಹಿಸುವುದು ಕೂಡ ಅಸಾಧ್ಯ. ಆದರೆ ಅಂತಹ ತ್ಯಾಗದಿಂದ ದೇಶಕ್ಕೆ ಪ್ರಯೋಜನವಾಗಿದೆ ಎಂದು  ತಿಳಿದಾಗ, ಸಮಾಜ ಗುರುತಿಸಿದಾಗ ಆವರಿಸಿಕೊಳ್ಳುವ ಧನ್ಯತಾ ಭಾವವು ಬದುಕನ್ನು ಮುಳುಗಿಸಲು ಬಿಡದೆ ತೇಲುವಂತೆ ಮಾಡುತ್ತದೆ, ಹೊಸ ಹುರುಪು ತುಂಬಿಸುತ್ತದೆ. ಎಲ್ಲ ಕಳೆದುಕೊಂಡ ಮೇಲೆಯೂ ಸಮಾಜಕ್ಕೆ ಏನನ್ನು ಕೊಡಬಲ್ಲೆವು ಎಂಬ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ‘ಕಾರ್ಗಿಲ್ ವಿಜಯ್ ದಿವಸ್’ ಸೇರಿದಂತೆ ಯಾವುದೇ ‘ವಿಜಯ್ ದಿವಸ್’ನ ಆಚರಣೆ ದೇಶಕ್ಕಾಗಿ ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ಅವರ ಬದುಕಿನ ಸಾರ್ಥಕ್ಯವನ್ನು ನೆನಪು ಮಾಡಿಕೊಡುತ್ತದೆ. ಮಂಗಳೂರು ಕ್ಯಾ|  ಪ್ರಾಂಜಲ್ ಬೆಳೆದ, ಓಡಾಡಿದ ಮತ್ತು ಇಷ್ಟಪಟ್ಟಜಾಗ ಆಗಿರುವುದರಿಂದ ಅವನಿಗೆ ಮಂಗಳೂರಿನಲ್ಲಿ ದೊರೆತ ಗೌರವದಿಂದ ಆತ ತುಂಬಾ ಖುಷಿಯಾಗಿರುತ್ತಾನೆ ಎಂದು ಅ ನುರಾಧಾ ಹೇಳಿದರು.

ಇದೇ ಸಂದರ್ಭದಲ್ಲಿ ಅನುರಾಧಾ, ಅವರ ಪತಿ ವೆಂಕಟೇಶ್ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ವೀರ ಯೋಧರಾದ ನಾಯಕ್ ಲೀಲಾಧರ ಕಡಂಬೋಡಿ,  ನಾಯಕ್ ಪ್ರವೀಣ್ ಶೆಟ್ಟಿಮತ್ತು ಸಿ.ಪಿ.ಒ ವಿಜಯನ್ ಕೆ.ಅವರನ್ನು ಸಮ್ಮಾನಿಸಲಾಯಿತು. 

ದ.ಕ ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕ್ಯಾ| ದೀಪಕ್ ಅಡ್ಯಂತಾಯ, ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಐ.ಎನ್.ರೈ, ವೇದಿಕೆಯ ಪ್ರಧಾನ  ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ವೇದಿಕೆಯ ಮಂಗಳೂರು ಘಟಕದ ಸಂಚಾಲಕ ಸಂದೀಪ್ ಪಂಪ್‌ವೆಲ್, ಮಾಜಿ ಸೈನಿಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು,  ನಿವೃತ್ತ ಸೈನಿಕರು  ಪಾಲ್ಗೊಂಡಿದ್ದರು. 

ದ.ಕ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಾರ್ಜಂಟ್ ಶ್ರೀಕಾಂತ ಶೆಟ್ಟಿಬಾಳ ಸ್ವಾಗತಿಸಿದರು. ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು. ಗುರುಚಂದ್ರ ಹೆಗ್ಡೆ ವಂದಿಸಿದರು.

ಸುರತ್ಕಲ್‌ನಿಂದ ಕದ್ರಿ ಯುದ್ಧ ಸ್ಮಾರಕದವರೆಗೆ ಅಮರ್ ಜವಾನ್ ಜ್ಯೋತಿ ಮತ್ತು ಕ್ಯಾ| ಪ್ರಾಂಜಲ್ ಪುತ್ಥಳಿಯನ್ನೊಳಗೊಂಡ್ಥ ಟ್ಯಾಬ್ಲೋಗಳು ಹಾಗೂ ದ್ವಿಚಕ್ರ ವಾಹನಗಳ ಮೆರವಣಿಗೆ ನಡೆಯಿತು. ಅನುರಾಧಾ ಮತ್ತು ವೆಂಕಟೇಶ್ ಅವರು ಕೂಡ ತೆರೆದ ಜೀಪಿನಲ್ಲೇ ಮೆರವಣಿಗೆಯಲ್ಲಿ ಸಾಗಿ ಬಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article