‘ನೆಹರೂವಿಯನ್ ಥಿಂಕಿಂಗ್: ಪಾತ್ ಟು ಪ್ರೋಗ್ರೆಸ್ ಆರ್ ಅದರ್ವೈಸ್’ ವಿಚಾರ ಸಂಕಿರಣ
ಉಜಿರೆ: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.19 ರಂದು ‘ನೆಹರೂವಿಯನ್ ಥಿಂಕಿಂಗ್: ಪಾತ್ ಟು ಪ್ರೋಗ್ರೆಸ್ ಆರ್ ಅದರ್ವೈಸ್’ ವಿಚಾರ ಸಂಕಿರಣ ಜರಗಿತು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನೆಹರೂ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ನೆಹರೂ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ದಯಾನಂದ ನಾಯ್ಕ್ ಮಾತನಾಡಿ, ನೆಹರೂ ಅವರು ಈ ದೇಶಕ್ಕೆ ಅನೇಕ ವಿಚಾರಗಳನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ, ಅಲಿಪ್ತ ನೀತಿ ಇಂತಹ ವಿಚಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಜೆಗಳು ರಾಜಕೀಯವಾಗಿ ಯಾವುದೇ ಸಿದ್ಧಾಂತ ಹೊಂದಿದ್ದರೂ ರಾಜಕೀಯ ವ್ಯಕ್ತಿಗಳ ಬಗ್ಗೆ ಟೀಕೆ ಮಾಡುವ ಸಂದರ್ಭದಲ್ಲಿ ಅವರ ಹಿನ್ನೆಲೆ, ಕೊಡುಗೆಗಳನ್ನು ಅರಿತಿರಬೇಕು ಎಂದು ಹೇಳಿದರು.
ಜನರಲ್ಲಿ ನೆಹರೂ ಅವರ ಬಗ್ಗೆ ಋಣಾತ್ಮಕ ಹಾಗೂ ಧನಾತ್ಮಕ ಅಭಿಪ್ರಾಯವಿದೆ. ಏನೇ ಆದರೂ ಆರೋಗ್ಯಕರ ದೇಶದ ನಿರ್ಮಾಣಕ್ಕೆ ನೆಹರೂ ಅವರ ಜೊತೆಗೆ ಬಹಳಷ್ಟು ಚಿಂತಕರ ಕೊಡುಗೆಯೂ ಇದೆ. ಜ್ಞಾನ ವೃದ್ಧಿಯಾಗಬೇಕಾದರೆ ಓದುವುದರ ಜೊತೆಗೆ ಅನ್ವೇಷಣೆ ಮಾಡಬೇಕು. ಇಂತಹ ಚಿಂತನ ಮಂಥನಕ್ಕಾಗಿ ನೆಹರೂ ಕೇಂದ್ರ ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಕುಲಸಚಿವೆ ಹಾಗೂ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಶಲೀಪ್ ಎ.ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿ, ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉದಯಕುಮಾರ್ ಎಂ.ಎ., ನೆಹರೂ ಅಧ್ಯಯನ ಕೇಂದ್ರದ ಉಪನ್ಯಾಸಕಿ ಡಾ. ನಯನ, ಎಸ್‌ಡಿಎಂ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಎಸ್.ಎನ್. ಕಾಕತ್ಕರ್, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ನಟರಾಜ್ ಎಚ್.ಕೆ., ಭಾಗ್ಯಶ್ರೀ, ಶಿವಕುಮಾರ್ ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅನಂತ್ ಸ್ವಾಗತಿಸಿ, ಮಾನಸ ವಂದಿಸಿದರು. ಅರ್ಪಿತಾ ಅತಿಥಿ ಪರಿಚಯ ನೀಡಿದರು. ಹರ್ಷಿತಾ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು.

