
Ujire: ಬೆಳ್ತಂಗಡಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ
ಹೃದಯ ಶ್ರೀಮಂತಿಕೆಯ ಸೇವೆಯ ಮೂಲಕ ಬದುಕಿನಲ್ಲಿ ಪರಿವರ್ತನೆ: ಪೂರನ್‌ವರ್ಮ
ಉಜಿರೆ: ರೋಟರಿಕ್ಲಬ್‌ನ ಸದಸ್ಯರೆಲ್ಲ ಹೃದಯಶ್ರೀಮಂತಿಕೆಯನ್ನು ಹೊಂದಿದವರಾಗಿದ್ದು, ನಿಸ್ವಾರ್ಥ ಸೇವೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿ ಬದುಕಿನಲ್ಲಿ ಪರಿವರ್ತನೆ ಮಾಡುವುದೇ ರೋಟರಿಕ್ಲಬ್‌ನ ಉದ್ದೇಶವಾಗಿದೆ ಎಂದು ಬೆಳ್ತಂಗಡಿ ರೋಟರಿಕ್ಲಬ್‌ನ ನೂತನ ಅಧ್ಯಕ್ಷ ಉಜಿರೆಯ ಪೂರನ್‌ವರ್ಮ ಹೇಳಿದರು.
ಅವರು ಗುರುವಾರ ಉಜಿರೆಯಲ್ಲಿ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಮಾತನಾಡಿದರು.
ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷನಾಗಿ ತಾನು ಆಯ್ಕೆಯಾಗಿರುವುದು ದೇವರು ಸಮಾಜಸೇವೆ ಮಾಡಲು ಕೊಟ್ಟ ವಿಶೇಷ ಅವಕಾಶ ಎಂದು ಭಾವಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆವರು ಮತ್ತು ಹೇಮಾವತಿ ಹೆಗ್ಗಡೆ ಆವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಶಿಸ್ತಿನ ಚೌಕಟ್ಟಿನೊಳಗೆ ಎಲ್ಲಾ ಸೇವಾಕಾರ್ಯಗಳನ್ನು ಯಶಸ್ವಿಯಾಗಿ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ತಾಯಿ ಸೋನಿಯಾವರ್ಮ ಮತ್ತು ತಮ್ಮ ಕೆಯೂರ್‌ವರ್ಮ ಅವರ ಬಲವೂ, ಬೆಂಬಲವೂ ಇದೆ ಎಂದರು.
ರೋಟರಿಕ್ಲಬ್‌ನಲ್ಲಿ ಎಲ್ಲರಿಗೂ ಸೇವೆ ಮೂಲಕ ಕಲಿಯುವ ಅವಕಾಶಗಳಿವೆ. ಎಲ್ಲಾ ಸದಸ್ಯರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ತಮ್ಮ ಕುಟುಂಬದ ಕಾರ್ಯಕ್ರಮದಂತೆ ಎಲ್ಲಾ ಸೇವಾಕಾರ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ಹೊಸ ಸೇವಾ ಕಾರ್ಯಗಳು:
ಸೌರಶಕ್ತಿ ಬಳಕೆ, ಕನ್ನಡ ಶಾಲೆಗಳಿಗೆ ಕಾಯಕಲ್ಪ, ರಸ್ತೆ ಸುರಕ್ಷತೆ, ಹಿರಿಯ ನಾರಿಕರ ಆರೋಗ್ಯ ರಕ್ಷಣೆ, ಹೃದಯರೋಗಿಗಳ ಚಿಕಿತ್ಸೆಗೆ ನೆರವು ಮೊದಲಾದ ಸೇವಾಕಾರ್ಯಗಳನ್ನು ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾಡುವುದಾಗಿ ಪ್ರಕಟಿಸಿದರು.
ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಮಾತನಾಡಿ, ನಮ್ಮಲ್ಲಿ ಮೊದಲು ಪರಿವರ್ತನೆ ಮಾಡಿಕೊಂಡು ನಂತರ ಸಮಾಜದಲ್ಲಿಯೂ ಧನಾತ್ಮಕ ಸುಧಾರಣೆ ಮಾಡಬೇಕು. ಬೆಳ್ತಂಗಡಿ ರೋಟರಿಕ್ಲಬ್‌ನ ಸೇವೆ-ಸಾಧನೆಗೆ ಅಭಿನಂದಿಸಿ ರೋಟರಿ ಜಾಗತಿಕ ಅನುದಾನದ ಮೂಲಕ ಇನ್ನೂ ಹೆಚ್ಚಿನ ಸೇವೆ ಮಾಡಬೇಕೆಂದು ಸಲಹೆ ನೀಡಿದರು.
ರೋಟರಿ ಜಿಲ್ಲಾ ಉಪರಾಜ್ಯಪಾಲ ಮೊಹಮ್ಮದ್ ವೊಳವೂರು ‘ರೋಟರ್’ ಸಂಚಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವಿದ್ಯಾಕುಮಾರ್ ಕಾಂಚೋಡು ವರದಿ ಸಾದರ ಪಡಿಸಿದರು.
ನೂತನ ಸದಸ್ಯರು:
ಸೋನಿಯಾವರ್ಮ, ಪ್ರವೀಣ್ ಗೋರೆ, ಸುವೀರ್ ಜೈನ್, ಪ್ರಶಾಂತ್ ಜೈನ್ ಮತ್ತು ಆದರ್ಶ ಕಾರಂತ ಅವರನ್ನು ರೋಟರಿ ಕ್ಲಬ್‌ನ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.
ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಸಂದೇಶ್ ರಾವ್ ವಂದಿಸಿ, ಡಾ. ಎ. ಜಯಕುಮಾರ ಶೆಟ್ಟಿ ಮತ್ತು ವಕೀಲ ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.