ಸೆ.3 ರಂದು ಮದರ್ ತೆರೇಸಾ ಸಂಸ್ಮರಣಾ ದಿನ
ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಹಾಗೂ ಸಾಮರಸ್ಯ ಮಂಗಳೂರು ಇವುಗಳ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 27ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸೆ.3 ರಂದು ಬೆಳಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ.
ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕಾಸ್ಟಲಿನೊ ಗುರುವಾರ
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ವಿಚಾರ ಸಂಕಿರಣವನ್ನು ನಿವೃತ್ತ ಜಿಲ್ಲಾಧಿಕಾರಿ, ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿಷಯ ಮಂಡನೆ
ಮಾಡಲಿದ್ದಾರೆ. ಸಾಮಾಜಿಕ ಚಿಂತಕಿ, ಸಾಹಿತಿ ಆಯೆಷಾ ಫರ್ಝಾನಾ ಯು.ಟಿ. ಪ್ರತಿಕ್ರಿಯೆ ನೀಡಲಿದ್ದಾರೆ. ಈ ಸಂಸ್ಥೆ ಸ್ಥಾಪಿಸಲು ಪ್ರಮುಖ ಕಾರಣಕರ್ತರಾದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು ಎಂದರು.
ಬೆಳಗ್ಗೆ 8.30ಕ್ಕೆ ಏಕತಾರಿ ಹಾಡುಗಾರರಾದ ನಾದಾ ಮಣಿನಾಲ್ಕೂರು ಹಾಗೂ ಲಿಯೋ ರಾಣಿಪುರ ಅವರಿಂದ ‘ಪ್ರೀತಿಯ ಸಿಂಚನ’ ಎಂಬ ಸೌಹಾರ್ದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಜೆ 5 ಗಂಟೆಗೆ ನಗರದ ಓಷನ್ ಪರ್ಲ್ ಹೊಟೇಲ್‌ನಲ್ಲಿ ಆಯ್ದ ಗಣ್ಯರೊಂದಿಗೆ ಸಂಸದ ಸಸಿಕಾಂತ್ ಸೆಂಥಿಲ್ ನಾಗರಿಕ ಸಂವಾದ ನಡೆಸಲಿದ್ದಾರೆ ಎಂದು ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷೆ ಮಂಜುಳಾ ನಾಯಕ್ ಹೇಳಿದರು.
ವೇದಿಕೆಯ ಪದಾಧಿಕಾರಿಗಳಾದ ಸುನಿಲ್ ಕುಮಾರ್ ಬಜಾಲ್, ಮಹಮ್ಮದ್ ಕುಂಜತ್ತಬೈಲ್, ಡೋಲ್ಫಿ ಡಿಸೋಜಾ, ಸ್ಟಾನಿ ಡಿಕುನ್ನಾ, ಎಲಿಯಾಸ್ ಫರ್ನಾಂಡಿಸ್ ಉಪಸ್ಥಿತರಿದ್ದರು.