ಮಕ್ಕಳ ಪಾಲಿನ ದೇವತೆ, ಸಮಾಜ ಸೇವಕ ರವಿ ಕಟಪಾಡಿ ತಂಡದಿಂದ ಅನಾರೋಗ್ಯ ಪೀಡಿತ ೪ ಮಕ್ಕಳಿಗೆ 5 ಲಕ್ಷ ರೂ. ಹಸ್ತಾಂತರ
ಕಟಪಾಡಿ: ಮಕ್ಕಳ ಪಾಲಿನ ದೇವತೆ, ಸಮಾಜ ಸೇವಕ ರವಿ ಕಟಪಾಡಿ ಮತ್ತು ಅವರ ತಂಡ ಶ್ರೀ ಕೃಷ್ಣ ಜನ್ಮಾಷ್ಟಮಿಯ 2 ದಿನದಲ್ಲಿ ವೇಷ ಹಾಕಿ ಸಂಗ್ರಹಿಸಿದ ಸುಮಾರು 5 ಲಕ್ಷ ರೂ.ವನ್ನು ಅಶಕ್ತ, ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ಭಾನುವಾರ ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ, ಕೊರಗಜ್ಜ ಸನ್ನಿಧಿಯಲ್ಲಿ ಹಸ್ತಾಂತರಿಸಿದರು.
ಕಳೆದ 9 ವರ್ಷಗಳಿಂದ ರವಿ ಕಟಪಾಡಿಯವರು ಅಷ್ಟಮಿಯ 2 ದಿನದಲ್ಲಿ 1 ಕೋಟಿ 33 ಲಕ್ಷ ರೂ. ಸಂಗ್ರಹಿಸಿ, ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಈಗಾಗಲೇ ನೀಡಿದ್ದಾರೆ.
ಈ ಬಾರಿ ಸಂಗ್ರಹಿಸಿದ 5 ಲಕ್ಷ ರೂ.ವನ್ನು ಅನ್ವಿತ್ ವೈ, ಮೌನೇಶ್ ಸಹಿತ ನಾಲ್ವರು ಮಕ್ಕಳಿಗೆ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ಕೊರಗಜ್ಜ ಸನ್ನಿಧಾನದ ಮುಖ್ಯಸ್ಥ ತುಕಾರಾಂ ಎಸ್. ಉರ್ವ ಹಾಗೂ ಅಧ್ಯಕ್ಷ ಹರಿಶ್ಚಂದ್ರ ಪಿಲಾರು ಮತ್ತು ರವಿ ಕಟಪಾಡಿ ತಂಡದ ಸದಸ್ಯರ ಕೂಡುವಿಕೆಯೊಂದಿಗೆ ಮಕ್ಕಳ ಪಾಲಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ದೈವಸ್ಥಾನದ ಮುಖ್ಯಸ್ಥ ತುಕಾರಾಂ ಎಸ್. ಉರ್ವ ಮಾತನಾಡಿ, ರವಿ ಕಟಪಾಡಿಯವರು ವಿಶಿಷ್ಟ ವೇಷ ಭೂಷಣ ಧರಿಸಿ ಒಂದು ಕೋಟಿಗೂ ಹೆಚ್ಚು ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನೀಡಿ ಕೃತಾರ್ಥರಾಗಿದ್ದಾರೆ. ಅವರ ಸೇವೆ ನಿರಂತರವಾಗಲಿ ಮುನ್ನಡೆಯಲಿ, ಕ್ಷೇತ್ರದ ಬಬ್ಬು ಸ್ವಾಮಿ, ಕೊರಗಜ್ಜನ ಆಶೀರ್ವಾದ ಸದಾ ಇವರ ತಂಡದ ಮೇಲಿರಲಿ ಎಂದು ಹಾರೈಸಿದರು.
ರವಿ ಕಟಪಾಡಿ ಮಾತನಾಡಿ, ನಮ್ಮ ತಂಡದ ಸಹಾಯದಿಂದ ಕಳೆದ 9 ವರ್ಷಗಳಿಂದ 136 ಮಕ್ಕಳಿಗೆ ಸಹಾಯ ಮಾಡಲಾಗಿದೆ. ಜನರೇ ಸ್ವ ಹಿತಾಸಕ್ತಿಯಿಂದ ಸಹಾಯ ಮಾಡಿದ್ದಾರೆ. ಈ ಬಾರಿ ಸಂಗ್ರಹಿಸಿದ 5 ಲಕ್ಷ ರೂ.ವನ್ನು ಬಾಯಿಯ ಸಮಸ್ಯೆ, ಬೋನ್ ಮ್ಯಾರೊ ಪೀಡಿತ ಮಗು ಸಹಿತ ಇನ್ನಿಬ್ಬರು ಮಕ್ಕಳಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ವೇಷದ ಪ್ರಸಾದನ ಕಲಾವಿದ ದಿನೇಶ್ ಮಟ್ಟು, ಈ ಬಾರಿ ರವಿಯವರೊಂದಿಗೆ ಅವತಾರ್-2 ವೇಷ ಧರಿಸಿದ ಆಶಿಕ್ ಅಂಚನ್, ಶಂಕರ್, ಅರುಣ್, ರವಿ ಫ್ರೆಂಡ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.