ರಾಷ್ಟ್ರೀಯ ಹೆದ್ದಾರಿ ಅಕ್ರಮ ಕಟ್ಟಡ ತೆರವಿಗೆ ಚಾಲನೆ

ರಾಷ್ಟ್ರೀಯ ಹೆದ್ದಾರಿ ಅಕ್ರಮ ಕಟ್ಟಡ ತೆರವಿಗೆ ಚಾಲನೆ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ೬೬ರ ಇಕ್ಕೆಲಗಳಲ್ಲೂ ಸರ್ವಿಸ್ ರಸ್ತೆ ಬೇಕು. ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಂಡ ಭೂಮಿಯ ಸರಿಯಾದ ನಿರ್ವಹಣೆ ಮಾಡಬೇಕು ಎಂಬ ಜನರ ಬಹುಸಮಯದ ಬೇಡಿಕೆ ಇದೀಗ ಈಡೇರುವಂತೆ ಕಂಡುಬರುತ್ತಿದೆ. ಈ ಬಗೆಗಿನ ರಿಟ್ ಪಿಟಿಷನ್ ಒಂದರಲ್ಲಿ ಸುಪ್ರೀಂ ಕೋರ್ಟ್ ಫೆ.20ರಂದು ಆದೇಶ ನೀಡಿದ ಬೆನ್ನಿಗೆ ಹೆದ್ದಾರಿ ಪ್ರಾಧಿಕಾರ ಜಡತ್ವ ಕೊಡವಿ ಎದ್ದಂತೆ ಕಾಣುತ್ತದೆ.

ಹೆದ್ದಾರಿ ಹಾದುಹೋಗುವ ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ, ಸಾಲಿಗ್ರಾಮ ಗ್ರಾಮಗಳಲ್ಲಿನ ಪ್ರಾಧಿಕಾರ ಸ್ವಾಧೀನ ಹೊಂದಿದ ಕಟ್ಟಡಗಳು ಹಾಗೂ ಅಕ್ರಮ ಕಟ್ಟಡ, ರಚನೆಗಳನ್ನು ತೆರವುಗೊಳಿಸುವುದು ಮತ್ತು ಸರ್ವಿಸ್ ರಸ್ತೆ ನಿರ್ಮಿಸುವ ಕಾರ್ಯಗಳಿಗೆ ಪ್ರಾಧಿಕಾರ ಚಾಲನೆ ನೀಡಿದೆ. ಈ ಬಗ್ಗೆ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್ ಆಜ್ಮಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಆಡಳಿತಾತ್ಮಕ ನೆರವು ಹಾಗೂ ಅಗತ್ಯವೆನಿಸಿದರೆ ಪೊಲೀಸ್ ಬಂದೋಬಸ್ತ್ ಏರ್ಪಡಿಸುವಂತೆ ವಿನಂತಿಸಿದ್ದಾರೆ.

ಕುಂದಾಪುರದಿಂದ ಬೀಜಾಡಿಯವರೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ಈಗಾಗಲೇ ಇದೆ. ಕುಂಭಾಶಿ, ತೆಕ್ಕಟ್ಟೆಗಳಲ್ಲಿ ಇಲ್ಲ. ಉಡುಪಿಯವರೆಗೂ ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂಬುದು ಜನರ ಬೇಡಿಕೆಯಾಗಿತ್ತು. ಇದಕ್ಕಾಗಿ ಪ್ರಾಧಿಕಾರ ಭೂಮಿ, ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಹೆಚ್ಚಿನೆಡೆ ಪರಿಹಾರ ಪಡೆದಿದ್ದರೂ ಕಟ್ಟಡಗಳ ಮಾಲೀಕರು, ಬಾಡಿಗೆದಾರರು ಕಟ್ಟಡ ಖಾಲಿ ಮಾಡಿಲ್ಲ. ಅಧಿಕಾರಿಗಳೂ ಆಮಿಷಕ್ಕೊಳಗಾದವರಂತಿದ್ದು ತಕರಾರು ಎತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ಜಾಣ ಕುರುಡು ಪ್ರದರ್ಶಿಸುತ್ತಿದ್ದರು. ಇದೀಗ ಸುಪ್ರೀಂ ಕೋರ್ಟ್ ಆದೇಶ ಇವರೆಲ್ಲರ ನಿದ್ದೆ ಕೆಡಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೆಲವೆಡೆ ಸರ್ವಿಸ್ ರಸ್ತೆಯನ್ನು ಈಗಾಗಲೇ ನಿರ್ಮಿಸಿದ್ದರೂ ಅವುಗಳ ನಿರ್ವಹಣೆ ಸೂಕ್ತವಾಗಿಲ್ಲ. ಕುಂದಾಪುರದಿಂದ ಬಂದು ಹೋಗುವ ಎಲ್ಲ ಬಸ್ಸುಗಳೂ ಸರ್ವಿಸ್ ರಸ್ತೆಗಳನ್ನು ಬಳಸುತ್ತಿಲ್ಲ. ಕೆಲವು ದಿನಗಳಿಂದ ಟ್ರಾಫಿಕ್ ಪೊಲೀಸರು, ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವಂತೆ ಕ್ರಮವಹಿಸಿದ್ದಾರೆ. ಕುಂದಾಪುರ ಬೊಬ್ಬರ್ಯನ ಕಟ್ಟೆ ಬಳಿ ಏಕಮುಖ ಸಂಚಾರವಿರುವ ಸರ್ವಿಸ್ ರಸ್ತೆಯಿಂದ ವಾಹನಗಳು ಹಠಾತ್ತನೇ ಹೆದ್ದಾರಿಗೆ ನುಗ್ಗಿ ಗಲಿಬಿಲಿ ಸೃಷ್ಠಿಸುತ್ತಿವೆ. ಅಪರೂಪಕ್ಕೆ ಇಲ್ಲಿ ಪೊಲೀಸ್ ಸಿಬ್ಬಂದಿ ನಿಂತಿರುತ್ತಾರಷ್ಟೇ. ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಅಕ್ರಮಿಗಳಿಗೆ ದಂಡ ಹಾಕುವ ಪ್ರಕ್ರಿಯೆ ಇನ್ನೂ ಜಾರಿಗೊಂಡಿಲ್ಲ. 

ಎಲ್ಲೆಡೆ ಕಸ ಹಾಕುವ ಜನರ ಚಾಳಿ ನಿಂತಿಲ್ಲ. ಅಂತೂ ಇದೀಗ ಪ್ರಾಧಿಕಾರದವರು ಸೋಮವಾರದಿಂದ ಅಕ್ರಮ ವಸತಿಗಳನ್ನು ತೆರವುಗೊಳಿಸುವ ಮತ್ತು ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ ಗ್ರಾಮಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಈ ಬಗ್ಗೆ ಪ್ರಾಧಿಕಾರ ಕುಂದಾಪುರ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ಕೋಟ ಸಬ್‌ಇನ್‌ಸ್ಪೆಕ್ಟರ್‌ರಿಗೂ ಮಾಹಿತಿ ನೀಡಿದೆ. ಇಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಈ ಹಿಂದೆಯೂ ಸಂಯುಕ್ತ ಕರ್ನಾಟಕ ಹಲವು ವರದಿಗಳನ್ನು ಪ್ರಕಟಿಸಿ ಜನಾಭಿಪ್ರಾಯ ರೂಪಿಸಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article