ಸಮುದ್ರ ತೀರದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ: ಕೊಲೆ ಶಂಕೆ
Sunday, September 22, 2024
ಮಂಗಳೂರು: ನಗರದ ತೋಟ ಬೆಂಗ್ರೆ ಅಳಿವೆಬಾಗಿಲು ಸಮೀಪದ ಸಮುದ್ರತೀರದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಬಾಗಲಕೋಟೆ ಜಿಲ್ಲೆಯ ಅಮೀನಗಡ ಮೂಲದ ಮುತ್ತು ಬಸವರಾಜ್ ವಡ್ಡರ್ ಆಲಿಯಾಸ್ ಮುದುಕಪ್ಪ ಮೃತಪಟ್ಟ ವ್ಯಕ್ತಿ.
ಮಂಗಳೂರು ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮುತ್ತು ಬಸವರಾಜ್ ಹಲವಾರು ವರ್ಷಗಳಿಂದ ತೋಟ ಬೆಂಗ್ರೆ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದರು ಎನ್ನಲಾಗಿದೆ. ಇದೀಗ ಅವರು ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಮೃತರು ವಿಪರೀತ ಕುಡಿತದ ಚಟ ಹೊಂದಿದ್ದು, ಯಾರೊಂದಿಗೋ ಜಗಳವಾಡಿಕೊಂಡು ಕೊಲೆಗೀಡಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.