ಮರಣ ತಂದ ಮರಣ ಬಲೆ
Monday, September 9, 2024
ಕುಂದಾಪುರ: ಪಾರಂಪಳ್ಳಿ ಪಡುಕರೆ ಸಮುದ್ರದಲ್ಲಿ ಮೀನುಗಾರಿಕೆಗಾಗಿ ಮರಣಬಲೆ ಬಿಡಲು ಹೋಗಿ ವ್ಯಕ್ತಿ ನೀರುಪಾಲಾದ ದುರ್ಘಟನೆ ಸೋಮವಾರ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಭಾಸ್ಕರ ಪೂಜಾರಿ (55) ಎಂದು ಗುರುತಿಸಲಾಗಿದೆ.
ಭಾಸ್ಕರ ಪೂಜಾರಿ ಪಾರಂಪಳ್ಳಿಯ ಮರಿನಾ ಮನೆ ಗೆಸ್ಟ್ ಹೌಸ್ ಸಮೀಪ ಸಮುದ್ರದಲ್ಲಿ ಬಿಟ್ಟಿದ್ದ ಮರಣಬಲೆಯನ್ನು ಮೇಲೆತ್ತಲು ಸಮುದ್ರಕ್ಕೆ ಇಳಿದಿದ್ದರು. ಅದೇ ವೇಳೆ ಅಪ್ಪಳಿಸಿದ ಭಾರೀ ಗಾತ್ರದ ಅಲೆಗೆ ಸಿಲುಕಿ ಮುಳುಗಿದ್ದಾರೆ.
ತಕ್ಷಣ ಮಲ್ಪೆ ಕರಾವಳಿ ಪೊಲೀಸ್ ಠಾಣೆಯ ಕೆ.ಎನ್.ಡಿ. ಸಿಬ್ಬಂದಿಗಳಾದ ಸತೀಶ್ ಮತ್ತು ಸುದರ್ಶನ್ ಎಸ್. ಕುಂದರ್ ತಮ್ಮ ಜೀವದ ಹಂಗು ತೊರೆದು ಸಮುದ್ರಕ್ಕೆ ಹಾರಿ ವ್ಯಕ್ತಿಯನ್ನು ದಡಕ್ಕೆ ತಂದು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಭಾಸ್ಕರ್ ಪೂಜಾರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ರಕ್ಷಣಾ ಪಡೆಯ ಶ್ರಮ ವ್ಯರ್ಥವಾದ ಬಗ್ಗೆ ಅತೀವ ಬೇಸರ ಉಂಟುಮಾಡಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.