ಬೇಡಿಕೆ ಈಡೇರದಿದ್ದರೆ ಬೆಂಗಳೂರು ಚಲೋ: ಅನಿಲ್ ಕೆ. ಪೂಜಾರಿ
ಮಂಗಳೂರು: ಗ್ರಾಮ ಆಡಳಿತ ಅಧಿಕಾರಿಗಳ ಕೆಲಸದ ಒತ್ತಡವನ್ನು ಕಡಿಮೆಗೊಳಿಸುವ ಜತೆಗೆ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ನಾನಾ ಜಿಲ್ಲೆಗಳ ಅಧಿಕಾರಿಗಳು ಬೆಂಗಳೂರು ಚಲೋ ನಡೆಸಿ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕೆ. ಪೂಜಾರಿ ಹೇಳಿದರು.
ನಗರದ ಮಿನಿ ವಿಧಾನ ಸೌಧದ ಮುಂಭಾಗ ರಾಜ್ಯ ಸರಕಾರ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರನ್ನುದ್ದೇಶಿಸಿ ಮಾತನಾಡಿ, ನಾನಾ ಇಲಾಖೆಗಳ ಕೆಲಸವನ್ನು ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಹೊರಲಾಗುತ್ತಿದೆ. ಸರಕಾರದ 21 ಮೊಬೈಲ್ ಅಪ್ಲೇಕಶನ್‌ಗಳಿದ್ದು, ಅದನ್ನು ತ್ವರಿತಗತಿಯಲ್ಲಿ ಮುಗಿಸಲು ಪೂರಕವಾದ ಮೊಬೈಲ್ ನೀಡಿಲ್ಲ, ಡಾಟಾ ಸೌಲಭ್ಯ ನೀಡುತ್ತಿಲ್ಲ. ತಾಂತ್ರಿಕ ಹುದ್ದೆಗೆ ನೀಡುವ ವೇತನವನ್ನು ನೀಡಬೇಕು. 30ವರ್ಷದಿಂದ ಸಿಬ್ಬಂದಿ ಪದೋನ್ನತಿ ನೀಡಿಲ್ಲ, ಜಿಲ್ಲೆಯ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯಿರುವ ಕಾರಣ ಮೌಲ್ಯಮಾಪನ ಕೈಬಿಡಬೇಕು. ಇದೇ ಕಾರಣದಿಂದ ಅಮಾನತಾದ ಸಿಬ್ಬಂದಿ ಮರುನೇಮಕಗೊಳಿಸಬೇಕು. ಅಧಿಕಾರಿಗಳ ಕೆಲಸ ಮಾಡುವ ಕಚೇರಿ ಹಳೇಯ ಕಾಲದ ಕಟ್ಟಡವಾಗಿದ್ದು, ಹೊಸ ಕಟ್ಟಡ ವ್ಯವಸ್ಥೆ ನೀಡಬೇಕು, ಉತ್ತಮ ನೀರು, ವಿದ್ಯುತ್ ಬಿಲ್ ವ್ಯವಸ್ಥೆ, ಪೀಠೋಪಕರಣ ಮೂಲ ಸೌಕರ‍್ಯ ನೀಡಬೇಕು. ಕೆಲಸದ ಅವಧಿ ಹೊರತುಪಡಿಸಿ ಉಳಿದ ಸಮಯದಲ್ಲಿ ವರ್ಚುವಲ್ ಸಭೆಯನ್ನು ನಿಷೇಧಿಸಬೇಕು ಎಂದರು.
ಗ್ರಾಮ ಆಡಳಿತ ಅಧಿಕಾರಿ ಉಷಾ ಮಾತನಾಡಿ, ನಮಗೆ ಕಚೇರಿ ನಿರ್ವಹಣೆಗೆ ಅನುದಾನ ಬರುತ್ತಿಲ್ಲ, ಆಪ್ ಒತ್ತಡ ಹೆಚ್ಚಾಗುತ್ತಿದ್ದು ಸರ್ವರ್ ಡೌನ್‌ನಿಂದ ಕೆಲಸಗಳು ತ್ವರಿತಗತಿಯಲ್ಲಿ ಆಗಲ್ಲ. ಇದರಿಂದ ನಾವು ಬೈಗುಳ ತಿನ್ನಬೇಕಾಗುತ್ತದೆ. ನಮ್ಮ ಮೂಲಭೂತ ಸೌಕರ್ಯ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾದೀತು ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಮಾರ್, ಖಜಾಂಜಿ ಧರ್ಮ ಸಾಮ್ರಾಜ್, ಜಂಟಿ ಕಾರ್ಯದರ್ಶಿ ಅವಿನಾಶ್ ಬಿಲ್ಲವ, ಕಂದಾಯ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಜಯಂತ್, ಕೋಶಾಧಿಕಾರಿ ಪ್ರಸನ್ನ ಪಕಳ, ಸಂಘದ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.